ಮಂಗಳೂರು:ನಗರದ ಪಣಂಬೂರು ಕಡಲಿನಲ್ಲಿ 'ಮಂತ್ರ ಗ್ರೋಮ್ ಸರ್ಚ್' 13-16 ವಯಸ್ಸಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯು ಭಾನುವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ಜರುಗಿತು.
ಸರ್ಫಿಂಗ್ ಸ್ವಾಮಿ ಫೌಂಡೇಷನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫಯರ್ ವೈರ್, ಸರ್ಫ್ ಬೋರ್ಡ್ ವತಿಯಿಂದ ನಡೆದ ಈ ಸರ್ಫಿಂಗ್ ಸ್ಪರ್ಧೆಯಲ್ಲಿ ಮಂಗಳೂರು, ಮುಲ್ಕಿ, ಪಣಂಬೂರು ತಣ್ಣೀರುಬಾವಿ, ಬೆಂಗರೆ ಪರಿಸರದ ಸುಮಾರು 50 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.
ಪಣಂಬೂರು ಕಡಲಿನಲ್ಲಿ ಮಕ್ಕಳ ಸರ್ಫಿಂಗ್ ಸ್ಪರ್ಧೆ ಈ ಸಂದರ್ಭ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ನಿರ್ವಹಣಾ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ, 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸರ್ಫಿಂಗ್ ಸ್ಪರ್ಧೆಯನ್ನು ನಾವು ಪಣಂಬೂರಿನಲ್ಲಿ ಆಯೋಜಿಸಿದ್ದೆವು. 23 ಸ್ಪರ್ಧಾಳುಗಳು ನೋಂದಣಿ ಮಾಡಿಕೊಂಡಿದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಆಡಿರುವ ಸ್ಪರ್ಧಾಳುಗಳಲ್ಲಿ 4-5 ಮಕ್ಕಳು ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಇವರು ಸರ್ಫಿಂಗ್ನಲ್ಲಿ ಸಮರ್ಥರಾಗಿರುವ ಚೆನ್ನೈ, ಕೊಲ್ಲಂ ಮುಂತಾದ ಕಡೆಯ ಸ್ಪರ್ಧಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವರಾಗಿದ್ದಾರೆ. ಕಳೆದ ಬಾರಿ ನಡೆದಿದ್ದ ಸರ್ಫಿಂಗ್ ಸ್ಪರ್ಧೆಯಲ್ಲಿ ಪಣಂಬೂರಿನ ಬಾಲಕನೋರ್ವ ದ್ವಿತೀಯ ಸ್ಥಾನ ಪಡೆದಿದ್ದ. ಈ ಸಲ ಇನ್ನಷ್ಟು ಸ್ಪರ್ಧೆಗಳಲ್ಲಿ ಗೆಲುವಿನ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗನ್ನು ಮಾಡುವ ಉದ್ದೇಶ ಇದ್ದು, ಅದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ಅದಕ್ಕಾಗಿ ಸರ್ಫಿಂಗ್ ತಂಡದ ಎಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದು, ಮುಂದಿನ ಸೀಸನ್ನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ನಡೆಸುತ್ತೇವೆ ಎಂದು ಯತೀಶ್ ಬೈಕಂಪಾಡಿ ಮಾಹಿತಿ ನೀಡಿದರು.