ಬೆಳ್ತಂಗಡಿ:ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ, ವಿದ್ಯಾರ್ಥಿಗಳ ಮೇಲೆ ಕರಿಛಾಯೆ ಬೀರಿದೆ. ಖಾಸಗಿ ಶಾಲೆಗಳಲ್ಲಿ ನಡೆಸುತ್ತಿರುವಂತೆ, ಸರ್ಕಾರಿ ಶಾಲೆಗಳಲ್ಲೂ ಆನ್ಲೈನ್ ಕ್ಲಾಸ್ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆನ್ಲೈನ್ ಮೂಲಕ ಪಾಠ ಕೇಳುತ್ತಿರುವ ಮಕ್ಕಳು ನೆಟ್ವರ್ಕ್ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಿಗದೆ ಆನ್ಲೈನ್ ಕ್ಲಾಸ್ ನಡೆಸುವುದಾದರೂ ಹೇಗೆ ಅನ್ನೋ ಚಿಂತೆ ಶಿಕ್ಷಕರಿಗೆ, ಮಕ್ಕಳಿಗೆ ಕಾಡಲಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಮಕ್ಕಳು ಗುಡ್ಡದ ಮೇಲೆ ಟೆಂಟ್ ನಿರ್ಮಿಸಿ, ಪಾಠ ಕೇಳುತ್ತಿದ್ದಾರೆ.
ಹೆಚ್ಚಿನ ಖಾಸಗಿ ಶಾಲೆಗಳು ನಗರದ ಸಮೀಪವಿರುವುದರಿಂದ ಅವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಲ್ಲ. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆಟ್ವರ್ಕ್ ಸಿಗದೆ, ಕ್ಲಾಸ್ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮನ್ನೇ ಪ್ರಶ್ನೆ ಮಾಡಿ ಖಾಸಗಿ ಶಾಲೆಯ ಕಡೆ ಕೈತೋರಿಸುತ್ತಾರೆ. ಅಧಿಕಾರಿಗಳಿಗೆ ಹಳ್ಳಿ ಶಾಲೆಗಳ ಪರಿಸ್ಥಿತಿ ಅರ್ಥ ಆಗುವುದಿಲ್ಲ. ಇದರಿಂದ ನಮಗೂ ಯಾವ ರೀತಿ ಪಾಠ ಮಾಡುವುದೆಂಬ ಚಿಂತೆ ಕಾಡುತ್ತಿದೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗಬೇಕೆಂದರೆ, ಸರ್ಕಾರ ಅವರಿಗೆ ನೆಟ್ವರ್ಕ್ ಸೌಲಭ್ಯ ಕಲ್ಪಿಸಬೇಕಿದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಟವರ್ ನಿರ್ಮಿಸಿ, ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.
ಇದನ್ನೂ ಓದಿ:ನೆಟ್ವರ್ಕ್ ಸಮಸ್ಯೆ.. ಬಂಟ್ವಾಳದಲ್ಲಿ ಆನ್ಲೈನ್ ಕ್ಲಾಸ್ಗೆ ನದಿ ತಟವೇ ಗತಿ