ಪುತ್ತೂರು(ದಕ್ಷಿಣ ಕನ್ನಡ): ಬಾಲ ಕಾರ್ಮಿಕ ಪದ್ದತಿ ದೇಶಕ್ಕೆ ಮಾರಕವಾಗಿದ್ದು, ಚಿಕ್ಕ ಮಕ್ಕಳನ್ನು ದುಡಿಸುವ ಪದ್ದತಿ ದೇಶದಿಂದ ತೊಲಗಬೇಕು. ಈ ಪದ್ದತಿ ನಿರ್ಮೂಲನೆಗೊಳಿಸಲು ಸರ್ಕಾರದ ಜೊತೆಗೆ ಎಲ್ಲರೂ ಕೈಜೋಡಿಸಬೇಕೆಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ನ್ಯಾಯಿಕ ದಂಡಾಧಿಕಾರಿ ಮಂಜುನಾಥ ಹೇಳಿದರು.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ವಕೀಲರ ಸಂಘ, ಕಾರ್ಮಿಕ ಇಲಾಖೆ ಪುತ್ತೂರು ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇವುಗಳ ಸಂಯುಕ್ತಶ್ರಯದಲ್ಲಿ ಪುತ್ತೂರು ನ್ಯಾಯಾಲಯದ ಆವರಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ-2020 ಪ್ರಯುಕ್ತ ಜನಜಾಗೃತಿ ರಥ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳನ್ನು ಓದಿಸುವ ಬದಲಾಗಿ ಅವರನ್ನು ದುಡಿಮೆಗೆ ಕಳುಹಿಸುವ ಪದ್ದತಿಯಲ್ಲಿ ನಾವಿದ್ದೇವೆ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಪದ್ದತಿಗಳನ್ನು ನಿರ್ಮೂಲನೆ ಮಾಡಿ ಮಕ್ಕಳನ್ನು ದುಡಿಮೆಗೆ ಕಳುಹಿಸುವ ಪದ್ಧತಿಯಿಂದ ಹೊರ ಬರಬೇಕು ಎಂದು ಕರೆ ನೀಡಿದರು.