ಮಂಗಳೂರು:ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಆಗುಂತಕರು, ಗೋಣಿ ಚೀಲ ಮುಸುಕು ಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ 7ರ ಹೊತ್ತಿಗೆ ಮೂವರು ಬಾಲಕರು ನಗರದ ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಸಮೀಪದಲ್ಲಿರುವ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು, ಬಾಲಕರ ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ಸಂದರ್ಭ ಓರ್ವ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ.
ಇದರಿಂದ ಆಗುಂತಕರು ಕಂಗೆಟ್ಟಿದ್ದು, ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಂಚಾಡಿ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು, ಮಕ್ಕಳ ತಲೆಗೆ ಗೋಣಿ ಮುಸುಕು ಹಾಕುವ ದೃಶ್ಯ ದಾಖಲಾಗಿದೆ.