ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರು: ಬರ ಪರಿಹಾರ ವಿಚಾರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅನುಭವದ ಕೊರತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರದಲ್ಲಿ ನಿಯಮಗಳಿವೆ. ರಾಜ್ಯದಿಂದ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆ ವರದಿ ಬಂದ ಬಳಿಕ ಕೇಂದ್ರದಿಂದ ಅಧಿಕಾರಿಗಳು ಬಂದು ಸರ್ವೇ ಮಾಡಿ ಹೋಗುತ್ತಾರೆ. ಅದರ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತದೆ. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಅನುಭವದ ಕೊರತೆ ಇದೆ. ಅದಕ್ಕಾಗಿ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂಬ ಹೇಳಿಕೆಯನ್ನು ಕೊಡುತ್ತಾರೆ. ಮುಖ್ಯಮಂತ್ರಿ ಜಾಣಮರೆವು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.
ಬರ ಮತ್ತು ರೈತರ ಆತ್ಮಹತ್ಯೆ ಅಧ್ಯಯನಕ್ಕೆ ಬಿಜೆಪಿ ತಂಡ:ಬರ ಪರಿಹಾರದ ಜೊತೆಗೆ ರಾಜ್ಯದಲ್ಲಿ 5 ತಿಂಗಳಲ್ಲಿ 250 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ರೈತರ ಆತ್ಮಹತ್ಯೆ ಆಗಿತ್ತು. ಈಗ ಐದೇ ತಿಂಗಳಲ್ಲಿ 250 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೋಸ್ಕರ ಬರ ಮತ್ತು ರೈತರ ಆತ್ಮಹತ್ಯೆಯ ಬಗ್ಗೆ ಅಧ್ಯಯನ ಮಾಡಲು ಬಿಜೆಪಿಯಿಂದ ತಂಡ ಅಧ್ಯಯನ ಮಾಡಲಿದೆ. ಬರ ಘೋಷಣೆಯಾಗಿರುವ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಧ್ಯಯನ ಮಾಡಲಿದೆ. ನವೆಂಬರ್ 10 ರೊಳಗೆ ಈ ತಂಡ ವರದಿ ನೀಡಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ನೊಳಗೆ ಆಂತರಿಕ ಜಗಳ ಪ್ರಾರಂಭವಾಗಿದೆ. ಸ್ಪಷ್ಟವಾಗಿ ಮೂರು ತಂಡಗಳು ಕಾರ್ಯಾಚರಣೆ ಮಾಡುತ್ತಿವೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ತಂಡ ಇದೆ. ಸದ್ಯದಲ್ಲೇ ಈ ಮೂರು ತಂಡಗಳಲ್ಲಿ ಯಾವ ತಂಡ ಹೊರಗೆ ಬರುತ್ತದೆ ಎಂಬ ಸಂಶಯ ಕಾಡುತ್ತಿದೆ. ಶಿವಕುಮಾರ್ ಅವರನ್ನು ಹೊರಗಿಟ್ಟು ನಿನ್ನೆ ಡಿನ್ನರ್ ಕೂಟ ನಡೆದಿದೆ. ಇನ್ನೂ ಕೆಲವೇ ದಿನಗಳಲ್ಲಿ ರೆಸಾರ್ಟ್ ರಾಜಕಾರಣ ಪ್ರಾರಂಭವಾಗುತ್ತದೆ. ಇದನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಶಾಸಕರನ್ನು ಸೆಳೆಯಲು 50 ಕೋಟಿ ನೀಡಲಾಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಬಿಜೆಪಿ ಇದಕ್ಕೆ ಕೈ ಹಾಕಬೇಕಿಲ್ಲ. ಕಾಂಗ್ರೆಸ್ನ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದುಹೋಗಲಿದೆ ಎಂದರು.
ಬಿಜೆಪಿ ಟಿಕೆಟ್ಗಾಗಿ ಡೀಲ್ ಪ್ರಕರಣದಲ್ಲಿ ಈ ಬಗ್ಗೆ ಆರೋಪ ಮಾಡಿದವರು ಸ್ಪಷ್ಟಪಡಿಸಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ನಮ್ಮ ಬಳಿಗೆ ಯಾರೂ ಬರಬಹುದು. ಭಾವಚಿತ್ರ ತೆಗೆದುಕೊಳ್ಳಬಹುದು. ಆ ದೂರು ಬಂದಾಗಲೇ ನಾನು ದೂರು ದಾಖಲಿಸಲು ತಿಳಿಸಿದ್ದೇನೆ. ಅವರ ಬಂಧನಕ್ಕೆ ನಮ್ಮ ಸಹಕಾರ ನೀಡಲಿದ್ದೇನೆ. ಈ ರೀತಿಯ ವಂಚನೆ ಯಾರು ಮಾಡಿದರೂ ದೂರು ದಾಖಲಿಸಲು ತಿಳಿಸಿದ್ದೇನೆ ಎಂದರು.
ಶಾಸಕ ಹರೀಶ್ ಪೂಂಜಾ ಮೇಲಿನ ಕೇಸ್ಗೆ ವಿರೋಧ:ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ಕೇಸ್ ಮಾಡಿ ಶಾಸಕರ ಕರ್ತವ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ, ಹಿಟ್ಲರ್ ಧೋರಣೆಯಲ್ಲಿ ರಾಜ್ಯಭಾರ ಮಾಡುತ್ತಿದೆ. ಶಾಸಕ ಹರೀಶ್ ಪೂಂಜಾ ಅವರು ಅರಣ್ಯಾಧಿಕಾರಿಗೆ ಅಸಂಸದೀಯ ಪದಗಳಿಂದ ನಿಂದಿಸಿದ ಬಗ್ಗೆ ಪ್ರಶ್ನೆಗೆ, ಹರೀಶ್ ಪೂಂಜಾ ವರ್ತನೆಯನ್ನು ಪರೋಕ್ಷವಾಗಿ ಸಮರ್ಥಿಸಿದ ನಳಿನ್ ಕುಮಾರ್ ಕಟೀಲ್, ಅಧಿಕಾರಿಗಳು ವರ್ತನೆಯನ್ನು ಸರಿಪಡಿಸಬೇಕು. ಅಧಿಕಾರಿಗಳು ಗೂಂಡಗಿರಿ ಮಾಡಬಾರದು ಎಂದರು.
ಇದನ್ನೂ ಓದಿ:ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು? ಅವರು ಯೂತ್ ಐಕಾನ್: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್