ಮಂಗಳೂರು:ಗಡಿನಾಡ ಕವಿ ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಾರ್ಶನಿಕ ನಾರಾಯಣ ಗುರುಗಳ ಪಾಠವನ್ನು ಪರಿಷ್ಕೃತ ಪಠ್ಯಕ್ರಮದಲ್ಲಿ ಕೈಬಿಟ್ಟಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ಮಂಗಳೂರಿನ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರ ಸಂಘ, ಚಾಣಕ್ಯ ವಿದ್ಯಾಭಾರತಿ ಆಶ್ರಯದಲ್ಲಿ, ಮಂಗಳೂರು ವಿವಿ ಹಾಗೂ ಜಿಲ್ಲಾ ಪಿಯು ಏರ್ಪಡಿಸಿದ್ದ ' ರಾಷ್ಟ್ರೀಯ ಶಿಕ್ಷಣ ನೀತಿ -2020 ' ಕುರಿತ ಕಾರ್ಯಾಗಾರದ ಸಮಾರೋಪದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಾರಾಯಣ ಗುರುಗಳ ಬಗ್ಗೆ ಐದನೇ ತರಗತಿಯ ಪಠ್ಯದಲ್ಲಿ ಹಿಂದಿಗಿಂತಲೂ ವಿಸ್ತೃತವಾಗಿ ಕಲಿಸಲಾಗುತ್ತದೆ. ಕಯ್ಯಾರ ಕಿಞ್ಞಣ್ಣ ರೈ ಅವರ ವಿಚಾರವನ್ನೂ ಪಠ್ಯದಿಂದ ಕೈಬಿಡಲಾಗಿಲ್ಲ. ಶಿಕ್ಷಣ ಇಲಾಖೆ ಪ್ರಕಟಿಸಿದ ತಜ್ಞರ ಸಮಿತಿಗಳ ಪಠ್ಯಪುಸ್ತಕಗಳ ಪಿಡಿಎಫ್ ಪ್ರತಿಯಿಂದ ಇದನ್ನು ಪರಿಶೀಲಿಸಬಹುದಾಗಿದೆ. ಹೊಸ ಪಠ್ಯಕ್ರಮ ಅಳವಡಿಸುವಾಗ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.