ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾಷಷ್ಠಿ ವೈಭವ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಚಂಪಾಷಷ್ಠಿ ಉತ್ಸವದ ಭಾಗವಾಗಿ ನಿನ್ನೆ ಪಂಚಮಿ ರಥೋತ್ಸವ ಮತ್ತು ಇಂದು ಮುಂಜಾನೆ ಮಹಾರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿಗೆ ಒಳಪಡುವ ಸುಬ್ರಹ್ಮಣ್ಯ ಎಂಬುದು ದಟ್ಟವಾದ ಕಾಡು, ಬೆಟ್ಟಗಳು ಸೇರಿದಂತೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪುಟ್ಟ ಊರು. ಇಲ್ಲಿ ಇದೀಗ ಚಂಪಾಷಷ್ಠಿಯ ಸಂಭ್ರಮ ಮನೆಮಾಡಿದೆ. ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಇಲ್ಲಿನ ಪ್ರಸಿದ್ಧ ಉತ್ಸವಗಳಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ, ಪಂಚಮಿ ತೇರು, ದೇವರ ಅಭವೃತೋತ್ಸವ, ಶ್ರೀ ದೇವರ ನೀರುಬಂಡಿ ಉತ್ಸವ, ಲಕ್ಷದೀಪೋತ್ಸವ ಸೇರಿದಂತೆ ಮಹಾ ರಥೋತ್ಸವದಿಂದ ಪ್ರಸಿದ್ಧಿ ಪಡೆದಿದೆ.
ಕಾರ್ತಿಕ ಮಾಸದ ನಿರ್ಗಮನ, ಮಾರ್ಗಶಿರ ಮಾಸದ ಆಗಮನದಲ್ಲಿ ಚಂಪಾ ಷಷ್ಠಿಯ ಸೊಬಗು ಆರಂಭವಾಗುತ್ತದೆ. ಪವಿತ್ರ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ, ಉರುಳುಸೇವೆ ಮೂಲಕ ಅಥವಾ ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶ್ರೀ ದೇವರು ನಿನ್ನೆ ಪಂಚಮಿ ತೇರಿನಲ್ಲಿ ಮತ್ತು ಇಂದು ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಾನೆ ಎಂಬ ನಂಬಿಕೆ ಇದೆ. ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥ ಸಾಗುತ್ತಿರಬೇಕಾದರೆ ಲಕ್ಷಾಂತರ ಮಂದಿ ಕಟ್ಟಡಗಳ ಮೇಲೇರಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶ್ರೀ ಸುಬ್ರಹ್ಮಣ್ಯನ ದರ್ಶನ ಮಾಡುತ್ತಾರೆ. ರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ಕರಿಮೆಣಸು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಅರ್ಚಕರು ದೇವರಿಗೆ ಧರಿಸಿದ್ದ ಫಲ ಪುಷ್ಪಗಳನ್ನು ಭಕ್ತರತ್ತ ಎಸೆಯುತ್ತಾರೆ. ಇದನ್ನು ಮಹಾಭಾಗ್ಯವಾಗಿ ಮತ್ತು ಪ್ರಸಾದವಾಗಿ ಮನೆಗೆ ಭಕ್ತರು ಕೊಂಡೊಯ್ಯುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯದ ಈ ಬ್ರಹ್ಮರಥವನ್ನು ಬೆತ್ತದಿಂದ ಇಲ್ಲಿನ ಮೂಲ ನಿವಾಸಿಗಳು ಅಥವಾ ಮಲೆಕುಡಿಯ ವಂಶಜರು ಕಟ್ಟಲು ಪರಿಣಿತಿ ಪಡೆದಿದ್ದಾರೆ. ಅದೇ ರೀತಿ ಈ ಬ್ರಹ್ಮರಥವನ್ನು ಎಳೆಯುವುದು ಕೂಡ ಒಂದು ವಿಶೇಷತೆ ಆಗಿದೆ. ಚಂಪಾಷಷ್ಠಿಯ ಕೊನೆಯ ದಿನದಂದು ಕೊಪ್ಪರಿಗೆಯನ್ನು ಇಳಿಸುವ ಮೂಲಕ ವಾರ್ಷಿಕ ಜಾತ್ರೆಯು ತೆರೆ ಕಾಣುತ್ತದೆ.
ಇದನ್ನೂ ಓದಿ :ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಡಿ.10 ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ
ಈ ವರ್ಷದ ಜಾತ್ರಾ ಮಹೋತ್ಸವು ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ದೇವಸ್ಥಾನದ ಆಡಳಿತ ಮಂಡಳಿ, ದೇವಸ್ಥಾನದ ಸಿಬ್ಬಂದಿ, ಪೊಲೀಸ್, ಕಂದಾಯ, ಮೆಸ್ಕಾಂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು, ಗೃಹರಕ್ಷಕ ದಳದ ಸಿಬ್ಬಂದಿ ಜಾತ್ರೋತ್ಸವವನ್ನು ಅಚ್ಚುಕಟ್ಟಾಗಿ ನಡೆಯಲು ವ್ಯವಸ್ಥೆ ಕಲ್ಪಿಸಿದರು.