ಮಂಗಳೂರು (ದಕ್ಷಿಣ ಕನ್ನಡ) : ಚೈತ್ರಾ ವಂಚನೆ ಪ್ರಕರಣದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ನೊಟೀಸ್ ಕಳುಹಿಸಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ವಾಮೀಜಿ, ಚೈತ್ರಾ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಕಳುಹಿಸಿದ ನೊಟೀಸ್ ತಲುಪಿದೆ. ಇನ್ನೆರಡು ದಿನಗಳೊಳಗೆ ವಕೀಲರ ಜೊತೆಗೆ ಬೆಂಗಳೂರು ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು. ಈ ಹಿಂದೆ ಕೂಡ ಸ್ವಾಮೀಜಿ ಹೆಸರು ಕೇಳಿ ಬಂದಿದ್ದು, ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಮಾಜಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಜುಲೈ ತಿಂಗಳಲ್ಲಿ ಫೋನ್ ಮಾಡಿ ಈ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ತಿಳಿಸಿದ್ದರು. ಗೋವಿಂದ ಬಾಬು ಪೂಜಾರಿ ಅವರು ನಿಮಗೆ ಒಂದುವರೆ ಕೋಟಿ ನೀಡಿದ್ದು, ಅದನ್ನು ಅವರಿಗೆ ವಾಪಸ್ ನೀಡಿ ಎಂದು ಹೇಳಿದ್ದರು. ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಾನು ಆಕ್ರೋಶವಾಗಿ ಹೇಳಿದ್ದಾಗ ಆ ಬಳಿಕ ಫೋನ್ ಕರೆ ಕಡಿತಗೊಳಿಸಿದ್ದರು.
ಇದನ್ನೂ ಓದಿ :ಉದ್ಯಮಿಗೆ ವಂಚನೆ ಪ್ರಕರಣ.. ಚೈತ್ರಾ ಸೇರಿ ಏಳು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಆ ನಂತರ ಈ ವಿಚಾರದಲ್ಲಿ ನಾನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಬಜರಂಗದಳದ ಮುಖಂಡರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದೇವೆ. ಅದಾದ ನಂತರ ಮತ್ತೆ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ, ಅದು ನೀವಲ್ಲ ಅಭಿನವ ಸ್ವಾಮೀಜಿ ಎಂದು ಮಾತನಾಡಿದರು. ನಾನು ಅಭಿನವ ಸ್ವಾಮೀಜಿ ಅವರಿಗೂ ಕೂಡ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೆ. ಬಳಿಕ ಅಭಿನವ ಸ್ವಾಮೀಜಿ ಅವರ ಆಪ್ತರಾಗಿರುವ ಸೂಲಿಬೆಲೆ ಚಕ್ರವರ್ತಿ ಅವರಲ್ಲಿಯೂ ಮಾತನಾಡಿದೆ.
ಆಗ ಸೂಲಿಬೆಲೆ ಚಕ್ರವರ್ತಿ ಈ ವಿಚಾರದಲ್ಲಿ ತಾನು ಮಾಜಿ ಸಚಿವ ಸಿ.ಟಿ.ರವಿ ಅವರ ಜೊತೆಗೆ ಮಾತನಾಡಿದ್ದಾಗಿಯೂ ಹೇಳಿದ್ದರು. ಬಳಿಕ ನಾನು ಚೈತ್ರಾ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದೆ, ಚೈತ್ರಾ ಬರೆದ ಪ್ರೇಮ ಪಾಷಾ ಎಂಬ ಕೃತಿಗೆ ಬೆನ್ನುಡಿಯನ್ನು ನಾನು ಬರೆದ ಕಾರಣ ಅವರ ಪರಿಚಯವಿತ್ತು. ಅವರಲ್ಲಿ ವಿಚಾರಿಸಿದಾಗ ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಹೇಳಿದ್ದರು. ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಬಂದಿದ್ದು, ಇದೀಗ ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಸ್ವಾಮೀಜಿ ತಿಳಿಸಿದ್ದರು.
ಇದನ್ನೂ ಓದಿ :"ಚೈತ್ರಾ ಕುಂದಾಪುರ ವಂಚನೆ ಆರೋಪ ಪ್ರಕರಣದಲ್ಲಿ ನಾನಿಲ್ಲ": ಗುರುಪುರ ವಜ್ರದೇಹಿ ಸ್ವಾಮೀಜಿ ಸ್ಪಷ್ಟನೆ