ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಸರಗಳ್ಳರ ಹಾವಳಿ: ಇಬ್ಬರು ಮಹಿಳೆಯರ ಕರಿಮಣಿ ಸರ ಎಗರಿಸಿದ ಖದೀಮರು - gold chain snatching

ನಗರದಲ್ಲಿ ಎರಡು ಸರಗಳ್ಳತನ ಪ್ರಕರಣಗಳು ನಡೆದಿವೆ. ಎರಡೂ ಪ್ರಕರಣದಲ್ಲಿ ಇಬ್ಬರು ಮಹಿಳೆಯರಿಂದ 2 ಲಕ್ಷ 34 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಳವು ಆಗಿವೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸರಗಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Chain snatching in Mangaluru
ಸಗ್ರಹ ಚಿತ್ರ

By

Published : Nov 19, 2020, 10:41 PM IST

ಮಂಗಳೂರು: ನಗರದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಕರಿಮಣಿ ಸರ ಕಳೆದುಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ ಮಂಗಳೂರಿನ ಉರುಂದಾಡಿಗುಡ್ಡೆ ಪಂಜಿಮೊಗರಿಗೆ ಹೋಗುವ ಮಹಿಳೆಯೊಬ್ಬರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಖದೀಮ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದ್ದಾನೆ. ಇವರ ಚಿನ್ನದ ಕರಿಮಣಿ ಸರ 22 ಗ್ರಾಂ ಇದ್ದು, ರೂ. 80 ಸಾವಿರ ಇದರ ಮೌಲ್ಯ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಕೆಪಿಟಿ ಬಳಿಯ ಆರ್​ಟಿಒ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಸವಾರ ಬೈಕ್ ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸಿ ಮಹಿಳೆ ಹತ್ತಿರ ಬರುತ್ತಿದ್ದಂತೆ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಮತ್ತು ಇನ್ನೊಂದು ಸರವನ್ನು ಎಳೆದೊಯ್ದು ಪರಾರಿಯಾಗಿದ್ದಾನೆ. ಇವರ ಬಳಿಯಿದ್ದ 54 ಸಾವಿರ ರೂ. ಮೌಲ್ಯದ 13 ಗ್ರಾಂನ ಕರಿಮಣಿ ಸರ ಮತ್ತು 1 ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ಮತ್ತೊಂದು ಸರವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಪ್ರಕರಣದಲ್ಲಿ ಇಬ್ಬರು ಮಹಿಳೆಯರಿಂದ 2 ಲಕ್ಷ 34 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸರಗಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ABOUT THE AUTHOR

...view details