ಪುತ್ತೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಇನ್ನು ಮುಂದೆ ಬಾಯಿ ಮುಚ್ಚದಿದ್ದರೆ ಕೇಂದ್ರ ನಾಯಕರು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ, ಡಿ.ವಿ.ಸದಾನಂದ ಗೌಡ ಎಚ್ಚರಿಕೆ ನೀಡಿದ್ದಾರೆ.
ಬಾಯಿ ಮುಚ್ಚದಿದ್ದರೆ ಯತ್ನಾಳ ಮೇಲೆ ಕೇಂದ್ರ ನಾಯಕರಿಂದ ಸೂಕ್ತ ಕ್ರಮ : ಡಿವಿಎಸ್ ಪುತ್ತೂರಿನಲ್ಲಿ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಬಸವನಗೌಡ ಪಾಟೀಲ ಯತ್ನಾಳ ಇದೇ ರೀತಿಯ ವರ್ತನೆ ತೋರಿದ್ದರು. ಹಲವು ಎಚ್ಚರಿಕೆಯ ಬಳಿಕವೂ ಅವರು ತಮ್ಮ ವರ್ತನೆಯನ್ನು ಸರಿಪಡಿಸದ ಕಾರಣಕ್ಕೆ ನಾನೇ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೆ. ಇದೀಗ ಮತ್ತೆ ಅಂತಹದ್ದೇ ವರ್ತನೆಯನ್ನು ತೋರಿಸಲು ಆರಂಭಿಸಿದ್ದಾರೆ. ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಯತ್ನಾಳ್ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಾಯಕರ ಗಮನಕ್ಕೆ ಬಂದಿದೆ.
ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸಲಹೆ ಕೊಡುವ ಕೆಲಸವನ್ನು ಯತ್ನಾಳ ನಿಲ್ಲಿಸಬೇಕು. ಯತ್ನಾಳ್ ಸಲಹೆ ಕೇಳುವಂತಹ ಮಟ್ಟದಲ್ಲಿ ಪಕ್ಷ ಈಗ ಇಲ್ಲ ಎಂದು ಗುಡುಗಿದರು. ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ಯತ್ನಾಳ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದೇ ರೀತಿಯ ವರ್ತನೆಯನ್ನು ಮುಂದುವರೆಸಿದಲ್ಲಿ ಕೇಂದ್ರ ನಾಯಕರು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ. ಪಕ್ಷದಲ್ಲಿ ಅಸಮಾಧಾನವಿದ್ದಲ್ಲಿ ಅದನ್ನು ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ನಾಯಕರು ದೆಹಲಿಗೆ ಬಂದು ಕೇಂದ್ರ ನಾಯಕರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬಿಟ್ಟು ಬೀದಿ ಬದಿಯಲ್ಲಿ ಚರ್ಚೆ ಮಾಡುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಹರಿಹಾಯ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದ ಗಡಿ ವಿಚಾರದಲ್ಲಿ ತಗಾದೆ ತೆಗಯುತ್ತಿರುವುದಕ್ಕೆ ಸಿಎಂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ನಿಲುವನ್ನು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದು, ನಮ್ಮ ನೆಲ - ಜಲದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರ ಬೀಳುವ ಹಂತದಲ್ಲಿದೆ. ಮೊದಲು ಅವರ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.