ಕರ್ನಾಟಕ

karnataka

ETV Bharat / state

ಪುತ್ತೂರು: ಪೊದೆಯೊಳಗಿನ ಮುರುಕಲು ಮನೆಯಲ್ಲಿ 40 ವರ್ಷಗಳಿಂದ ಬ್ರಹ್ಮಚಾರಿಯ ಏಕಾಂತ ವಾಸ! - ಶಾಸಕ ಅಶೋಕ್ ರೈ

ಪುತ್ತೂರಿನ ನಗರಸಭಾ ವ್ಯಾಪ್ತಿಯ ಹೃದಯಭಾಗದಲ್ಲಿರುವ ಗುಡಿಸಲಿನಲ್ಲಿ ಬ್ರಹ್ಮಚಾರಿಯೊಬ್ಬರು ಕಳೆದ 40 ವರ್ಷದಿಂದ ವಾಸವಾಗಿದ್ದಾರೆ.

ಬ್ರಹ್ಮಚಾರಿ ಪಿ ಯು ಸಿರಾಜುದ್ದೀನ್
ಬ್ರಹ್ಮಚಾರಿ ಪಿ ಯು ಸಿರಾಜುದ್ದೀನ್

By ETV Bharat Karnataka Team

Published : Oct 3, 2023, 7:07 PM IST

ಮುರುಕಲು ಮನೆಯಲ್ಲಿ ಬ್ರಹ್ಮಚಾರಿಯ ಬದುಕು

ಮಂಗಳೂರು :ಹುಟ್ಟಿನಿಂದ ಸಾವಿನ ನಡುವೆ ಮನುಷ್ಯನಾದವನಿಗೆ ಹತ್ತು ಹಲವು ಆಸೆ, ಆಕಾಂಕ್ಷೆಗಳಿರುತ್ತವೆ. ಚಂದದ ಮನೆ ಕಟ್ಟಬೇಕು. ಮದುವೆಯಾಗಬೇಕು. ಪತ್ನಿ ಮಕ್ಕಳೊಂದಿಗೆ ಸುಖವಾಗಿ ಬಾಳಿ ಬದುಕಬೇಕು ಎಂಬೆಲ್ಲ ಬಯಕೆಗಳಿರುತ್ತವೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಅಂತಹ ಯಾವುದೇ ಆಸೆಗಳಿಲ್ಲ. ಒಂದರ್ಥದಲ್ಲಿ ಇವರು ಈ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ಇಂತಹ ವ್ಯಕ್ತಿಯೊಬ್ಬ ಪುತ್ತೂರಿನ ನಗರ ಭಾಗದಲ್ಲಿ ಪೊದೆಯೊಳಗಿನ ಮುರುಕು ಮನೆಯಲ್ಲಿ ಕಳೆದ 40 ವರ್ಷಗಳಿಂದ ಬದುಕುತ್ತಿದ್ದಾರೆ.

ಪುತ್ತೂರಿನ ನಗರಸಭಾ ವ್ಯಾಪ್ತಿಯ ಹೃದಯಭಾಗದಲ್ಲಿರುವ ಗುಡಿಸಲಿನಲ್ಲಿ ಏಕಾಂಗಿ ಬ್ರಹ್ಮಚಾರಿ ಪಿ.ಯು.ಸಿರಾಜುದ್ದೀನ್ ಎಂಬವರು ವಾಸಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಹೆಕ್ಕುವ ಕಾಯಕಯೋಗಿ ಇವರು. ಮುಂಜಾನೆದ್ದು ಎಪಿಎಂಸಿ ರಸ್ತೆಯ ಆಸುಪಾಸು ರಸ್ತೆ ಬದಿಯಲ್ಲಿರುವ ಕಸ ಹಾಗೂ ಗುಜರಿಗಳನ್ನು ಆಯುವ ಕಾಯಕ ಇವರದ್ದು. ಈ ಮೂಲಕ ನಗರ ಸೌಂದರ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತಾರೆ. ಮತ್ತೆ ಸಂಜೆಯ ಹೊತ್ತು ಅದೇ ಕೆಲಸ ಮುಂದುವರೆಯುತ್ತದೆ.

ಸುತ್ತಲೂ ಪೊದೆಗಳು, ನಡುವೆ ಮುರುಕಲು ಗುಡಿಸಲು. ಮಳೆ ಬಂದರೆ ಸೋರುವ ಸೂರು. ಬಿಸಿಲಿದ್ದರೆ ಸೂರ್ಯ ಕಿರಣಗಳ ತಾಪದ ಸಮಸ್ಯೆ. ಕಳೆದ ಕೆಲವು ದಿನಗಳ ಮಳೆಯಿಂದ ಮುರುಕಲು ಗುಡಿಸಲಿಗೆ ಹಾಕಿರುವ ಹಳೆಯ ಶೀಟುಗಳು ಕೆಳಗೆ ಬಿದ್ದುಹೋಗಿವೆ. ಇವರು ಮಲಗಬಹುದಾದ ಸ್ವಲ್ಪ ಜಾಗ ಮಾತ್ರ ಬೆಚ್ಚಗೆ ಕಾಣುತ್ತದೆ. ಗುಡಿಸಲು ಸುತ್ತ ತುಂಬಿರುವ ಪೊದೆಗಳಲ್ಲಿ ಹಾವುಗಳ ವಾಸ. ಕೆಲ ದಿನಗಳ ಹಿಂದೆ ಇಲ್ಲೊಂದು ಹೆಬ್ಬಾವು ಕೂಡಾ ವಾಸವಾಗಿತ್ತಂತೆ. ಆದರೆ ಇಂತಹ ಪರಿಸ್ಥಿತಿಯಲ್ಲೂ ಈ ಸ್ವಚ್ಛತಾ ಕಾಯಕ ಜೀವಿ ಚಿಂತೆ ಮಾಡಿಲ್ಲ. ಅದೇ ಮನೆ ಎಂಬ ಚಿಂದಿ ಗುಡಿಸಲಲ್ಲಿಯೇ ವಾಸವಾಗಿದ್ದಾರೆ.

1970 ರಿಂದಲೂ ಇದೇ ಸ್ಥಳದಲ್ಲಿರುವ ಈ ಸಿರಾಜುದ್ದೀನ್ ತನ್ನ ತಂದೆ, ಅಣ್ಣ, ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರಿದ್ದ ಟರ್ಪಾಲು ಮನೆಯಲ್ಲಿ ವಾಸವಾಗಿದ್ದಾರೆ. ಅಣ್ಣ ಮದ್ದಿಗೆಂದು ಹಲವು ವರ್ಷಗಳ ಹಿಂದೆ ಹೋದವ ವಾಪಸ್ ಬಂದಿಲ್ಲ. ತಮ್ಮನೊಬ್ಬ ಬೆಂಗಳೂರಿನಲ್ಲಿ ಅಪಘಾತದಲ್ಲಿ ತೀರಿಕೊಂಡ. ಇನ್ನೋರ್ವ ಮದುವೆಯಾಗಿ ಎಲ್ಲಿ ಹೋಗಿದ್ದಾನೋ ಗೊತ್ತಿಲ್ಲ. ಇಬ್ಬರು ತಂಗಿಯರು ಮದುವೆಯಾಗಿ ಹೋಗಿದ್ದಾರೆ. ತಂದೆ ತೀರಿಕೊಂಡ ನಂತರ ಸಿರಾಜುದ್ದೀನ್ ಏಕಾಂಗಿ. 27 ಸೆಂಟ್ಸ್ ಜಾಗ ಸಿರಾಜುದ್ದೀನ್ ಅವರಲ್ಲಿದೆ. ಇದರಲ್ಲಿ ಪೂರ್ತಿ ಪೊದೆಗಳೇ ತುಂಬಿದೆ. ಟರ್ಪಾಲು ಮನೆ ಬಿದ್ದು ಹೋದ ನಂತರ ಕಟ್ಟಿಕೊಂಡ ತಟ್ಟಿ ಮನೆ ಇವರ ವಾಸಸ್ಥಾನ. ಅದರ ಹತ್ತಿರ ಹೋಗಲೂ ಭಯ ಪಡಬೇಕು. ಅಂತಹ ಸ್ಥಿತಿಯಲ್ಲಿದೆ ಈ ತಟ್ಟಿಗೂಡು.

ನೀವು ಮನೆಗಾಗಿ ಅರ್ಜಿ ಕೊಟ್ಟಿಲ್ವಾ? ಎಂದರೆ, ನಾನು ಯಾರಲ್ಲೂ ಏನನ್ನೂ ಕೇಳಿಲ್ಲ ಎನ್ನುವ ಸಿರಾಜುದ್ದೀನ್ ಮನೆಯೇ ಇಲ್ಲ ಎಂದು ಮದುವೆಯೂ ಆಗಿಲ್ಲವಂತೆ. ಯಾಕೆ ಹೀಗೆ ನಿಮ್ಮ ಬದುಕು ಎಂದರೆ? ಗೊತ್ತಿಲ್ಲ ಎನ್ನುವಂತೆ ಮೌನವಾಗುತ್ತಾರೆ. ಪ್ರಸ್ತುತ ಇಲ್ಲಿಗೆ ಯಾರೂ ಬರುತ್ತಿಲ್ಲ. ಕೂರ್ನಡ್ಕ ಭಾಗದಲ್ಲಿನ ಉಪ್ಪಿನಂಗಡಿ ಪ್ರದೇಶದಲ್ಲಿ ಸಿರಾಜುದ್ದೀನ್ ಸಂಬಂಧಿಕರು ಇದ್ದಾರಂತೆ. ಆದರೆ ಇಲ್ಲಿಗೆ ಯಾರೂ ಬರುತ್ತಿಲ್ಲ. ಯಾರೂ ಬಂದು ನಿಲ್ಲುವ ಸ್ಥಿತಿಯಲ್ಲೂ ಇಲ್ಲಿನ ವ್ಯವಸ್ಥೆ ಇಲ್ಲ. ಸಿರಾಜುದ್ದೀನ್ ಮದುವೆಯಾಗಿಲ್ಲ. ಸುಮಾರು 60 ಹರೆಯದಲ್ಲಿರುವ ಇವರಲ್ಲಿ ರೇಷನ್ ಕಾರ್ಡ್, ಆಧಾರ್​ ಕಾರ್ಡ್​ ಇದೆ. ಆದರೆ ಅದನ್ನು ಬಳಸದೆ ಎಷ್ಟೋ ವರ್ಷಗಳು ಸಂದುಹೋಗಿವೆ.

ನಗರಸಭಾ ವ್ಯಾಪ್ತಿಯಲ್ಲಿ ಮೇಘನಗರದಲ್ಲಿರುವ ಈ ಚಿಂದಿ ಮನೆ ಅವರು ಹೆಕ್ಕಿಕೊಂಡು ಬಂದ ಕಸ ಹಾಗೂ ಚಿಂದಿ ಪೇರಿಸಿಟ್ಟ ಜಾಗ. ಮನೆಯೇ ಇಲ್ಲದ ಮೇಲೆ ಶೌಚಾಲಯ, ಸ್ನಾನದ ಕೊಠಡಿ ಎಲ್ಲಿ ಬರಬೇಕು. ಎಲ್ಲದಕ್ಕೂ ಬಯಲೇ ಗತಿ. ಹಿಂದೆ ಬಸ್ ನಿಲ್ದಾಣದ ಸಮೀಪ ಚಿಕ್ಕದೊಂದು ಹೋಟೆಲ್ ನಡೆಸುತ್ತಿದ್ದರಂತೆ. ಆದರೆ ಹಲವು ವರ್ಷಗಳ ಹಿಂದೆಯೇ ಈ ಕಾಯಕ ನಿಂತು ಹೋಗಿದೆ. ಪರಿಚಿತರ ಹೋಟೆಲ್ ಒಂದರಲ್ಲಿ ಮಧ್ಯಾಹ್ನದ ಊಟ ಸಿಕ್ಕಿದರೆ ಮಾಡುತ್ತಾರೆ. ಇಲ್ಲವಾದರೆ ಬರೀ ಹೊಟ್ಟೆಯಲ್ಲಿಯೇ ತಣ್ಣಗೆ ಇರುತ್ತಾರೆ. ಹೀಗೊಂದು ಬದುಕು ಸಾಧ್ಯನಾ? ಎಂದು ಯೋಚಿಸುವವರಿಗೆ ಸಿರಾಜುದ್ದೀನ್ ಬದುಕು ಸಾಕ್ಷಿಯಾಗಿ ನಿಂತಿದೆ.

ನಗರಸಭಾ ವ್ಯಾಪ್ತಿ ಪ್ರದೇಶದಲ್ಲಿರುವ ಈ ಬಡ ವ್ಯಕ್ತಿಗೊಂದು ಮನೆ ನೀಡುವ ಕೆಲಸವಾಗಬೇಕು. ಈ ಬಗ್ಗೆ ಸ್ಥಳೀಯಾಡಳಿತ, ಶಾಸಕ ಅಶೋಕ್ ರೈ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಯಾರಲ್ಲೂ ಏನನ್ನೂ ಕೇಳದ, ಯಾವುದನ್ನೂ ಅಪೇಕ್ಷಿಸದ ಇವರಿಗೆ ಕನಿಷ್ಠ ಪುಟ್ಟದೊಂದು ಮನೆ ಕಟ್ಟಿಕೊಡುವ ಕೆಲಸ ನಡೆಯಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯ.

ಇದನ್ನೂ ಓದಿ:ರಾತ್ರೋರಾತ್ರಿ ಹಾಕಿದ್ದ ಗುಡಿಸಲುಗಳನ್ನು ತೆರವುಗೊಳಿದ ಅಧಿಕಾರಿಗಳು: ನಿವೇಶನ ಹಂಚಿಕೆ ವಿಳಂಬಕ್ಕೆ ಗ್ರಾಮಸ್ಥರು ಆಕ್ರೋಶ

ABOUT THE AUTHOR

...view details