ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರನ್ನು ಹೊರತುಪಡಿಸಿದರೆ, ಪುತ್ತೂರು ಎರಡನೇ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರವಾಗಿ ಬೆಳೆಯುತ್ತಿದ್ದಂತೆ ಅಪರಾಧ ಕೃತ್ಯಗಳೂ ಈ ಭಾಗದಲ್ಲಿ ಹೆಚ್ಚೆಚ್ಚು ಸಂಭವಿಸುತ್ತಿವೆ. ಅದರಲ್ಲೂ ಕಳ್ಳತನ, ವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೃತ್ಯಗಳನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಪುತ್ತೂರು ನಗರದಾದ್ಯಂತ ಅಳವಡಿಸಲಾಗಿದೆ. ಆದರೆ ಇವುಗಳಲ್ಲಿ ಕೆಲವು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಕಾರು ಕಳುವಾದ ಪ್ರದೇಶಗಳೂ ನಗರದ ಮಧ್ಯದಲ್ಲೇ ಇದ್ದರೂ, ಸರಿಯಾದ ಸಿಸಿ ಕ್ಯಾಮರಾ ಇಲ್ಲದ ಕಾರಣ ಕಳ್ಳರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಹರ ಸಾಹಸವಾಗಿ ಪರಿಣಮಿಸಿದೆ. ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅಪರಿಚಿತ ವಾಹನಗಳು, ದ್ವಿಚಕ್ರ, ಲಘು ವಾಹನಗಳಿಗೆ ಹಿಟ್ ಅಂಡ್ ರನ್ ಮಾಡಿ ಪಲಾಯನ ಮಾಡುವ ಘಟನೆಗಳೂ ಹೆಚ್ಚಾಗುತ್ತಿವೆ. ಈ ಕಡೆಗಳಲ್ಲೂ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ಇಂಥ ಪ್ರಕರಣಗಳನ್ನೂ ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಆಯಕಟ್ಟಿನ ಪ್ರದೇಶಗಳು ಸೇರಿದಂತೆ ಪುತ್ತೂರು ನಗರದೆಲ್ಲಡೆ ಖಾಸಗಿ ಸಹಭಾಗಿತ್ವ ಸೇರಿದಂತೆ ಸರ್ಕಾರಿ ವೆಚ್ಚದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.