ಮಂಗಳೂರು: ಮೂಡಬಿದರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥಪುರದ ಬೆರಿಂಜೆ ಗುಡ್ಡ ಎಂಬಲ್ಲಿ ವಾಸವಿದ್ದ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಹಲ್ಲೆ ನಡೆಸಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂಡಬಿದಿರೆಯ ಬೆರಿಂಜೆ ಗುಡ್ಡದ ದಿನೇಶ್ ಪೂಜಾರಿ, ಮೂಡಬಿದರೆಯ ಕಲ್ಲಬೆಟ್ಟುವಿನ ಸುಕೇಶ್ ಪೂಜಾರಿ, ಮೂಡಬಿದರೆಯ ಮೂಡು ಮಾರ್ನಾವಿಡುವಿನ ಹರೀಶ್ ಪೂಜಾರಿ ಬಂಧಿತರು. ಆಗಸ್ಟ್ 30ರಂದು ಆರೋಪಿಗಳು ರಾತ್ರಿ 10 ಗಂಟೆ ಸುಮಾರಿಗೆ ಕಮಲ ಎಂಬುವವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಮತ್ತು 2 ಚಿನ್ನದ ಬಳೆಗಳನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ಕಮಲ ಮೂಡಬಿದರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಸಿಬಿ ಘಟಕದ ವಿಶೇಷ ತಂಡವನ್ನು ರಚಸಿ ಕಾರ್ಯಾಚರಣೆ ಆರಂಭಿಸಿದ್ದರು. ಕದ್ದಿರುವ ಚಿನ್ನಾಭರಣ ಮಾರಾಟ ಮಾಡಲು ಆರೋಪಿಗಳು ಮಂಗಳೂರಿಗೆ ಬರುತ್ತಿದ್ದಾರೆಂದು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ನಗರದ ಕುಲಶೇಖರ ಚರ್ಚ್ ಗೇಟ್ ಬಳಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಸಿಬಿ ಅಧಿಕಾರಿಗಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, 4.5 ಲಕ್ಷ ಮೌಲ್ಯದ 62 ಗ್ರಾಂ ತೂಕದ ಚಿನ್ನಾಭರಣ, 2ಸ್ಕೂಟರ್ ಹಾಗೂ 3ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳ ವಿರುದ್ದ ಮೂಡಬಿದರಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ:ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು..! ವಿಡಿಯೋ