ಕಡಬ :ತಾಲೂಕಿನ ನೆಲ್ಯಾಡಿಯ ಕೊಣಾಲು ಗ್ರಾಮದಲ್ಲಿರುವ ಕೊಣಾಲು ದೇವತೆ ಕ್ಷೇತ್ರದಲ್ಲಿ ಜಾತಿ ಹೆಸರಿನಲ್ಲಿ ಸಾಮಾಜಿಕ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ನಿಯೋಗ ದೈವಸ್ಥಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದೆ.
ದೈವಸ್ಥಾನದಲ್ಲಿ ಉತ್ಸವಾದಿಗಳು ನಡೆದಿದ್ದು, ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ನಾಗೇಶ್ ತಂತ್ರಿಯವರಿಗೆ ಮಾಹಿತಿ ನೀಡಿದ್ದ ಬಿಲ್ಲವ ಸಂಘದ ನಿಯೋಗ ಬುಧವಾರ ಕ್ಷೇತ್ರಕ್ಕೆ ತೆರಳಿ ತಂತ್ರಿಗಳ ಸಮ್ಮುಖದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಅವರಲ್ಲಿ ಸಾಮಾಜಿಕ ತಾರತಮ್ಯದ ಬಗ್ಗೆ ವಿವರಣೆ ಕೇಳಿದರು.
ಕೆಲ ನಿರ್ದಿಷ್ಟ ಜಾತಿ ಸಮುದಾಯಗಳನ್ನು ಕ್ಷೇತ್ರದ ಧಾರ್ಮಿಕ ವಿಧಿಗಳಿಂದ ದೂರವಿಟ್ಟಿರುವ ಬಗ್ಗೆ ಮತ್ತು ಈ ಸಮುದಾಯಗಳ ಸ್ಥಳೀಯ ಭಕ್ತರಿಗೆ ಪ್ರಸಾದ ನೀಡದಿರುವ ಬಗ್ಗೆ ಮಾಹಿತಿ ಕೇಳಲಾಗಿದೆ. ಕೊರೊನಾ ಲಾಕ್ಡೌನ್ ಪೂರ್ವದಲ್ಲಿ ಇದೇ ಕ್ಷೇತ್ರದಲ್ಲಿ ಇಂತದ್ದೇ ತಾರತಮ್ಯ ನಡೆದಿತ್ತು ಎನ್ನಲಾಗಿದ್ದು, ಈ ಸಮಯದಲ್ಲಿ ಸಮುದಾಯದ ನಾಯಕರು ಭೇಟಿ ನೀಡಿ, ಸಾಮಾಜಿಕ ತಾರತಮ್ಯ ಮಾಡದಂತೆ ತಿಳಿಸಿದ್ದರು.