ಮಂಗಳೂರು (ದ.ಕ): ಕೋವಿಡ್ ಸೋಂಕಿಗೆ ಬಲಿಯಾದವರ ಶವ ಸಂಸ್ಕಾರದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿದ ಸಂಬಂಧಪಟ್ಟ ಸಿಬ್ಬಂದಿ ಮಾತ್ರ ಭಾಗವಹಿಸಬೇಕು. ಬೇರೆಯವರು ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಬೇರೆಯವರು ಭಾಗವಹಿಸಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ವೆನ್‍ಲಾಕ್ ಆಸ್ಪತ್ರೆಯ ಸಾಮರ್ಥ್ಯ ಮೀರುವ ಸಾಧ್ಯತೆ ಇದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚುವರಿ ಬೆಡ್‍ಗಳನ್ನು ಕಾಯ್ದಿರಿಸಬೇಕು. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯ ಅನುಸಾರ ನಿವೃತ್ತ ಎಂಬಿಬಿಎಸ್ ಅಥವಾ ಆಯುಷ್ ವೈದ್ಯಾಧಿಕಾರಿಗಳ ಸೇವೆ ಪಡೆದುಕೊಳ್ಳಬಹುದು ಎಂದಿದ್ದಾರೆ.