ಬಂಟ್ವಾಳ (ದ.ಕ): ಲಾಕ್ ಡೌನ್ ಸಂದರ್ಭ ಅಂಗಡಿ ಬಾಗಿಲು ಮುಚ್ಚಲು ಸೂಚಿಸಿದಾಗ ನಿರಾಕರಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಬಂಟ್ವಾಳದಲ್ಲಿ ನಡೆದಿದೆ.
ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ತಂಡವೊಂದು ಅಡ್ಡಿಪಡಿಸಿದ ಘಟನೆ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಷೇಧಾಜ್ಞೆ ಇದ್ದಾಗಲೂ ಬಾರೆಕಾಡು ಪರಿಸರದಲ್ಲಿ ಅದನ್ನು ಉಲ್ಲಂಘಿಸಿ ಅಂಗಡಿ ತೆರೆದಿರುವುದನ್ನು ಗಮನಿಸಿದ ಫ್ಲೈಯಿಂಗ್ ಸ್ಕ್ವಾಡ್ನ ಅಧಿಕಾರಿ, ಬಾಗಿಲು ಹಾಕುವಂತೆ ಅಂಗಡಿಯವರನ್ನು ಸೂಚಿಸಿದ್ದು, ಈ ವೇಳೆ ಜನ ಜಮಾಯಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಲಾಗಿದೆ.
ಘಟನೆ ಸಂದರ್ಭ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದ್ದು, ಇದರಂತೆ ರಫೀಕ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ರಾಜೇಶ್ ನಾಯ್ಕ್ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಸೂಚಿಸಿದ್ದಾರೆ.