ಮಂಗಳೂರು:ಮಂಗಳಾದೇವಿ ನವರಾತ್ರಿ ಉತ್ಸವದ ಜಾತ್ರೆಯ ಸಂತೆ ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಬಾವುಟ ನೆಟ್ಟ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ತನ್ನ ಬೆಂಬಲಿಗರೊಂದಿಗೆ ಬಂದು ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿರುವ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದಾರೆ. ಆ ಬಳಿಕ ಎಲ್ಲಾ ಹಿಂದೂಗಳಗೆ ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹಿಂದೂ ಸಮುದಾಯದ ವ್ಯಾಪಾರಸ್ಥರು ಹೊಂದಿರುವ ಅಂಗಡಿಗಳಲ್ಲಿ ಮಾತ್ರ ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದು ಬೇರೆ ಸಮುದಾಯದ ನಡುವೆ ಕೋಮು ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡಿದಂತಾಗಲಿದೆ ಎಂದು ದಕ್ಷಿಣ ಪೊಲೀಸ್ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಮನೋಹರ್ ಪ್ರಸಾದ್ ನೀಡಿದ ದೂರಿನ ಮೇಲೆ ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.