ಮಂಗಳೂರು: ಸುರತ್ಕಲ್ನಲ್ಲಿ ಗುರುವಾರ ಸಂಜೆ ನಡೆದ ಯುವಕ ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರಿನ ಮಾಲೀಕ ಅಜಿತ್ ಕ್ರಾಸ್ತ ಎಂಬಾತನನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತರು, ಫಾಜಿಲ್ ಹತ್ಯೆಗೆ ಬಳಸಿದ ಕಾರಿನ ಪತ್ತೆಗೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಕಾರಿನ ಮಾಹಿತಿ ಸಿಕ್ಕಿದ್ದು, ಮಾಲೀಕನನ್ನು ಬಂಧಿಸಲಾಗಿದೆ. ಈತನಿಂದ ಆರೋಪಿಗಳು ಬಹಳ ಮುಖ್ಯ ಕೆಲಸಕ್ಕೆ ಕಾರು ಬೇಕೆಂದು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಓರ್ವ ಆರೋಪಿ ಬಂಧಿತ ಮಾಲೀಕನಿಗೆ ಆಪ್ತನಾಗಿದ್ದ ಎಂದರು.
ಕಾರು ಮಾಲೀಕ ಅಜಿತ್ ಹೆಚ್ಚಿನ ಹಣ ಸಿಗುವುದೆಂದು ಕಾರನ್ನು ಬಾಡಿಗೆಗೆ ನೀಡಿದ್ದ. ಸದ್ಯ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳು ಬಳಸಿದ ಕಾರು ಇನ್ನೂ ಪತ್ತೆಯಾಗಿಲ್ಲ. ತನಿಖೆ ವೇಳೆ ಹಲವು ಮಂದಿಯ ವಿಚಾರಣೆ ನಡೆಸಲಾಗಿದೆ. ಕೆಲವರು ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು ಮೊದಲಾದವರನ್ನು ವಿಚಾರಣೆ ನಡೆಸಿ ಬಿಡಲಾಗಿದೆ ಎಂದು ತಿಳಿಸಿದರು.