ಬಂಟ್ವಾಳ (ದಕ್ಷಿಣ ಕನ್ನಡ):ತಿರುವಿನ ರಸ್ತೆಗಳಲ್ಲಿ ಮಹಿಳೆಯರನ್ನು ಕರೆದುಕೊಂಡು ಹೋಗುವ ಸಂದರ್ಭ ಕಾರು ಚಾಲಕ ನಡೆಸಿದ ಆಟಾಟೋಪವೊಂದು ಆತಂಕ ಸೃಷ್ಟಿಸಿದೆ. ನಂತರ ಸ್ಥಳೀಯರು ಕಾರನ್ನು ಅಡ್ಡಹಾಕಿ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ಭಾನುವಾರ ನಡೆದಿದೆ. ಕಾಡುಮಠ ಕಾಲೋನಿ ನಿವಾಸಿ ಜಯ ಎಂಬುವರ ಪುತ್ರ ಸಾಗರ್ (26) ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ತೊಕ್ಕೊಟ್ಟು ಸಮೀಪ ಪಿಲಾರಿನ ಮಹಿಳೆಯರಿಬ್ಬರು ಕಾರಿನಲ್ಲಿದ್ದರು.
ತೊಕ್ಕೊಟ್ಟು ಸಮೀಪದ ಪಿಲಾರಿನ ಮಹಿಳೆಯರಿಬ್ಬರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗಲು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಹೊರಟಿದ್ದರು. ಕಾರು ಚಾಲಕ ಸಾಗರ್ ಬದಲಿ ರಸ್ತೆಗಳ ಮೂಲಕ ವೇಗವಾಗಿ ಒಟ್ಟಾರೆಯಾಗಿ ಕಾರನ್ನು ಚಲಾಯಿಸಿದ್ದಾನೆ. ಮೊದಲೇ ತಿರುವುಮುರುವು ರಸ್ತೆ, ಅದರಲ್ಲೂ ವೇಗವಾಗಿ ಹೋಗುವ ಕಾರನ್ನು ನೋಡಿ ಮಹಿಳೆಯರಿಬ್ಬರೂ ಭಯಭೀತರಾಗಿ ಚಾಲಕನ ಬಳಿ ವೇಗ ತಗ್ಗಿಸುವಂತೆ ಕೇಳಿಕೊಂಡಿದ್ದಾರೆ. ಚಾಲಕ ಇದಕ್ಕೆ ಕ್ಯಾರೇ ಎನ್ನದೇ ಜೋರಾಗಿ ಕಾರನ್ನು ಓಡಿಸಿದ್ದಾನೆ. ಮುಡಿಪು-ಬಾಕ್ರಬೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆ ಚಾಲಕನ ವರ್ತನೆಯಿಂದ ಬೆದರಿ ಕಂಗಾಲಾದ ಮಹಿಳೆಯರು ತಲೆ ಹೊರಗಡೆ ಹಾಕಿ ಕಾರು ನಿಲ್ಲಿಸುವಂತೆ ಬೊಬ್ಬೆ ಹೊಡೆದಿದ್ದಾರೆ.