ಬಂಟ್ವಾಳ(ದಕ್ಷಿಣ ಕನ್ನಡ):ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರು ಡಿಕ್ಕಿಯಾಗಿ, ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮಂಗಳೂರು ತಾಲೂಕಿನ ತೆಂಕಎಡಪದವು ಗ್ರಾಮದ ದೇವಸ್ಥಾನದ ಎದುರು ಶಾಸಕರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಾಯಗೊಂಡ ಶಾಸಕರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಘಟನೆಯಲ್ಲಿ ರಾಜೇಶ್ ನಾಯ್ಕ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನ ವಿರುದ್ಧ ಶಾಸಕರ ಆಪ್ತ ಸಹಾಯಕ ಪವನ್ ಕುಮಾರ್ ಶೆಟ್ಟಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ತೆಂಕಎಡಪದವುನಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಕ್ರಮಣ ಪೂಜೆಗೆಂದು ಶಾಸಕರು ಬಂದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ 1.30ರ ಸಮಯದಲ್ಲಿ ದೇವಸ್ಥಾನದ ಎದುರು ತಮ್ಮ ಕಾರಿನತ್ತ ಹೋಗಲೆಂದು ರಸ್ತೆಗೆ ಬಂದು ನಿಂತಾಗ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದಿದೆ. ಮೂಡುಬಿದಿರೆ ಕಡೆಯಿಂದ ಮಂಗಳೂರಿನತ್ತ ವೇಗವಾಗಿ ಬಂದ ಕಾರು ಶಾಸಕರಿಗೆ ಡಿಕ್ಕಿ ಹೊಡೆದಿದ್ದು, ಅವರು ರಸ್ತೆಯಲ್ಲಿ ಬಿದ್ದಿದ್ದಾರೆ.
ಚಾಲಕ ಅಪಘಾತ ಸಂಭವಿಸಿದ್ದನ್ನು ಅರಿತರೂ ಕಾರು ನಿಲ್ಲಿಸದೆ, ಮತ್ತಷ್ಟು ವೇಗವಾಗಿ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಗುರುಪುರ ಬಳಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಘಟನೆಯಿಂದ ಶಾಸಕರ ಕಾಲುಗಳಿಗೆ ಗಾಯಗಳಾಗಿದೆ. ಕೂಡಲೇ ಅವರ ಜೊತೆಗಿದ್ದವರು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾರು ಚಾಲಕ ಮಹಮ್ಮದ್ ಸುಫೈಲ್ ಈ ಅಪಘಾತವೆಸಗಿದ್ದಾಗಿ ಶಾಸಕರ ಆಪ್ತ ಕಾರ್ಯದರ್ಶಿ ನೀಡಿದ ದೂರಿನನ್ವಯ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಕಾರು ಪಲ್ಟಿ, ಗಾಯ- ವಿಡಿಯೋ