ಉಳ್ಳಾಲ(ದಕ್ಷಿಣ ಕನ್ನಡ): ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ - ಅಡ್ಕ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೂ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಪಡೀಲ್ ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿಯೇ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಿಫಾಯಿ ಎಂಬಾತ ಮೃತಪಟ್ಟಿದ್ದರು.
ಉಪ್ಪಳ ಹಿದಾಯತ್ ನಗರದ ಬಾಷರ್ ಅಹಮ್ಮದ್ (22) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟವರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದರು. ಜನವರಿ 28ರಂದು ಗಲ್ಫ್ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ತಂದೆಯ ಸಹೋದರನ ಪುತ್ರ ಬಾಷರ್ ಅಹಮ್ಮದ್ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮಾ ಹಾಗೂ ರೇವತಿ ಜೊತೆ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕೊಲ್ಯ ಸಮೀಪ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಏರಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.
ಇದನ್ನೂ ಓದಿ:ಬೆಳ್ಳಂಬೆಳಗೆ ಬಾವಿಗೆ ಬಿದ್ದ ಎರಡರ ಪೈಕಿ ಒಂದು ಕರಡಿ.. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಕರಡಿ ರಕ್ಷಣೆ
ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಿಫಾಯಿ ಕಾರಿನೊಳಗೆ ಸಿಲುಕಿ, ತಲೆ ಸೇರಿದಂತೆ ದೇಹ ಸಂಪೂರ್ಣ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನುಳಿದ ಮೂವರನ್ನು ಸ್ಥಳೀಯರು ಸೇರಿ ಕಾರಿನಿಂದ ಹಲವು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದರು. ಈ ಪೈಕಿ ಓರ್ವ ಯುವತಿಯನ್ನು ಪ್ರಶಾಂತ್ ಗಟ್ಟಿ ಎಂಬುವರು ಎ.ಜೆ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದರೆ, ಇನ್ನೋರ್ವಳನ್ನು ಟಿ.ಟಿ ಮೂಲಕ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ..ಭಾರಿ ಭ್ರಷ್ಟಾಚಾರ ಆರೋಪ: ಪೊಲೀಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲು
ಮೃತ ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬುವರ ಮಗನಾಗಿದ್ದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತ ಬಾಷರ್ ಅಹಮ್ಮದ್ ಸಹೋದರ ರಿಫಾಯಿ ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಸಹಪಾಠಿಗಳ ಜೊತೆಗೆ ಒಟ್ಟಿಗೆ ಸೇರಿದ್ದರು. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮಾ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಬ್ಯಾರಿಕೇಡ್ ಅಳವಡಿಕೆ ಮನವಿಗೆ ಸ್ಪಂದನೆ ಸಿಕ್ಕಿಲ್ಲ:ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಠಾಣಾ ಪೊಲೀಸರು ತಡವಾಗಿ ಆಗಮಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಬ್ಯಾರಿಕೇಡ್ ಅಳವಡಿಸುವ ಕುರಿತು ಹಲವು ಸಮಯದಿಂದ ಹೇಳುತ್ತಾ ಬಂದಿದ್ದರೂ, ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ಚಿಂತಾಮಣಿ ನಗರದಲ್ಲಿ ಸರಣಿ ಅಪಘಾತ:ಕುಡಿದ ಅಮಲಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಪಲ್ಟಿಯಾಗಿ ದ್ವಿಚಕ್ರ ವಾಹನದ ಮೇಲೆ ಬಿದ್ದು ನಂತರ ಟ್ರಾಕ್ಟರ್ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯದ ನಾಯನಹಳ್ಳಿ ಬಳಿ ಭಾನುವಾರ ರಾತ್ರಿ ನಡೆದಿದೆ. ಈ ವೇಳೆ ಎಳನೀರು ಮಾರಾಟ ಮಾಡುತ್ತಿದ್ದ ಆಟೋ ಚಾಲಕ ಮುನಿಯಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸಹ ಗಾಯಗೊಂಡಿದ್ದು, ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾತ್ರಿ ವಿಧಾನಸೌಧ ವೀಕ್ಷಣೆಗೆ ತೆರಳುತ್ತಿದ್ದಾಗ ಬೈಕ್ ಅಪಘಾತ; ಓರ್ವ ಸಾವು