ಮಂಗಳೂರು:ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಅವರ ಅಧೀನದಲ್ಲಿರುವ ಆಡಳಿತ ಕದ್ದುಮುಚ್ಚಿ ಹೋಗಿ ರಾತ್ರಿ ದೇವಾಲಯವನ್ನು ಒಡೆಯುವ ಅವಶ್ಯಕತೆ ಇರಲಿಲ್ಲ. ಇದೊಂದು ಟೂಲ್ಕಿಟ್ ಷಡ್ಯಂತ್ರದ ಭಾಗವಾಗಿ ಅವರು ವರ್ತಿಸಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸ್ಪಷ್ಟನೆ ನೀಡಲಿ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿರುವಾಗ ಬಹುಸಂಖ್ಯಾತರ ಭಾವನೆಗಳನ್ನು ಧಕ್ಕೆ ಮಾಡುವುದಕ್ಕಾಗಿ ಮಾಡಿರುವ ವ್ಯವಸ್ಥಿತ ಸಂಚಿನ ಭಾಗ ಇದು. ಆದ್ದರಿಂದ, ಸರ್ಕಾರದ ಪರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಸುಪ್ರೀಂಕೋರ್ಟ್ 2009ರ ಬಳಿಕ ನಿರ್ಮಾಣವಾದ ದೇವಸ್ಥಾನಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರೆ ವ್ಯವಸ್ಥೆಗಳನ್ನು ಮಾಡಿ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕೆಂಬ ಸ್ಪಷ್ಟ ಆದೇಶ ಇದೆ. ಎಲ್ಲೂ ದೇವಸ್ಥಾನ ಕೆಡವಲು ಆದೇಶ ನೀಡಿಲ್ಲ. ಸ್ಪಷ್ಟ ದಾಖಲೆಗಳು ಇರುವ ದೇವಾಲಯಗಳನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇದು ಷಡ್ಯಂತರದ ಭಾಗವೇನು ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ, ಈ ಬಗ್ಗೆ ಉತ್ತರ ಕೇಳಿ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.