ಮಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಮೂರು ರೈತ ಮಸೂದೆ ತಿದ್ದುಪಡಿಗಳ ವಿರುದ್ಧ ದಲ್ಲಾಳಿಗಳ, ಕಮಿಷನರ್ ಏಜೆಂಟ್ಗಳ ಮುಖವಾಣಿಯಾಗಿ ವಿವಿಧ ರಾಜಕೀಯ ಪಕ್ಷಗಳು ದೇಶಾದ್ಯಂತ ನಾಳೆ ಕರೆ ನೀಡಿರುವ ಬಂದ್ ಅವರ ರಾಜಕೀಯ ಹತಾಶೆಗೆ ಹಿಡಿದ ಕೈಗನ್ನಡಿ. ಈ ಮೂಲಕ ಮುಗ್ಧ ರೈತರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಕಳೆದ 60-70 ವರ್ಷಗಳಿಂದ ಆಳ್ವಿಕೆ ನಡೆಸಿರುವ ಯಾವುದೇ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಸರಿಪಡಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ದಲ್ಲಾಳಿಗಳ ಏಜೆಂಟ್ ಆಗಿ ಈ ಸರ್ಕಾರಗಳು ಕೆಲಸ ಮಾಡಿವೆ. ಆದ್ದರಿಂದ ಯಾವುದೇ ರೈತರು ಇವರ ಕುಮ್ಮಕ್ಕಿಗೆ ಮೋಸಹೋಗದಿರಿ ಎಂದು ಮನವಿ ಮಾಡಿದರು.
ಮುಗ್ಧ ರೈತರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದ ಕ್ಯಾ. ಗಣೇಶ್ ಕಾರ್ಣಿಕ್ ಎಪಿಎಂಸಿ ಕಾಯ್ದೆ ಇದ್ದರೂ ದೇಶದ 90 ಶೇಕಡಾ ರೈತರು ಮಧ್ಯವರ್ತಿಗಳಿಂದ ಶೋಷಣೆಗೊಳಗಾಗುತ್ತಿದ್ದರು. ಹಿಂದೆ ದೇಶವನ್ನು ಆಳಿದ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ತಮ್ಮ ಎಲ್ಲಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡು ಬರುತ್ತಿದೆ. ಕಳೆದ ಹಲವಾರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವ ವಾಮಪಂಥೀಯರು ತಾವು ಆಡಳಿತ ನಡೆಸುತ್ತಿರುವ ಕೇರಳ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯನ್ನು ಜಾರಿಗೇ ತಂದಿಲ್ಲ ಎಂದರು.
2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ದೇಶದ ರೈತರಿಗೆ ಆಶ್ವಾಸನೆ ನೀಡಿದಂತೆ ಈ ಮೂರು ಮಹತ್ವದ ಕೃಷಿ ಮಸೂದೆಗಳನ್ನು ತಿದ್ದುಪಡಿ ಮೂಲಕ ಜಾರಿಗೆ ತಂದಿದೆ. ಲೋಕಸಭೆಯ ಎಲ್ಲಾ ಪಕ್ಷದ ಸದಸ್ಯರಿರುವ ಕೃಷಿ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆದು, ಅಲ್ಲಿನ ಸಲಹೆಗಳನ್ನು ಪಡೆದೇ ಈ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ. ಈ ಸಮಿತಿಯಲ್ಲಿ ಕಾಂಗ್ರೆಸ್ ನ ಕಮಲ್ ನಾಥ್ ಹಾಗೂ ಅಮರಿಂದರ್ ಸಿಂಗ್ ಇದ್ದು, ಅವರು ತಿದ್ದುಪಡಿಗೆ ಸಮ್ಮತಿಯನ್ನು ಸೂಚಿಸಿದ್ದರು. ಈಗ ಅವರೇ ಈ ತಿದ್ದುಪಡಿಗೆ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಜಕೀಯ ಷಡ್ಯಂತರದ ಮೂಲಕ ರೈತರ ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಯಾವತ್ತೂ ರೈತರ ಪರವಾಗಿ ಇರಲಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನಾವು ಸದಾ ಸಿದ್ಧರಿರುತ್ತೇವೆ. ಇದರಲ್ಲಿ ಬದಲಾವಣೆಗಳು ಆಗಬೇಕಿದ್ದರೂ ನಾವು ಸಿದ್ಧರಿದ್ದೇವೆ. ಆದ್ದರಿಂದ ರೈತರು ನಾಳಿನ ಬಂದ್ ಅನ್ನು ವಿಫಲಗೊಳಿಸಬೇಕು ಎಂದು ಕ್ಯಾ. ಗಣೇಶ್ ಕಾರ್ಣಿಕ್ ವಿನಂತಿಸಿದರು.