ಮಂಗಳೂರು: ಮಂಗಳೂರಲ್ಲಿ ಇಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ದಿಂದ ಗರ್ಲ್ಸ್ ಕಾನ್ಫರೆನ್ಸ್ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೂ ಮುನ್ನ ಅನುಮತಿ ಪಡೆಯದೆ ರ್ಯಾಲಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ರ್ಯಾಲಿಯನ್ನು ತಡೆದರು.
ನಗರದ ಪುರಭವನದಲ್ಲಿ ಸಿಎಫ್ಐ ಕಾನ್ಫರೆನ್ಸ್ ಆಯೋಜಿಸಿತ್ತು. ಇದರ ಅಂಗವಾಗಿ ಜ್ಯೋತಿ ಸರ್ಕಲ್ನಿಂದ ಪುರಭವನದವರೆಗೆ ರ್ಯಾಲಿ ಮಾಡಲು ನಿರ್ಧರಿಸಲಾಗಿತ್ತು. ಕಾನ್ಫರೆನ್ಸ್ಗೆ ಅನುಮತಿ ಕೊಟ್ಟಿದ್ದ ಪೊಲೀಸರು, ರ್ಯಾಲಿ ನಡೆಸಲು ಅವಕಾಶ ನೀಡಿರಲಿಲ್ಲ. ಆದರೂ, ನಗರದ ಮಿಲಾಗ್ರಿಸ್ ಪಕ್ಕದ ಮಸೀದಿ ಬಳಿ ಸುಮಾರು 500 ವಿದ್ಯಾರ್ಥಿನಿಯರು ಸೇರಿ ರ್ಯಾಲಿ ನಡೆಸಲು ಯತ್ನಿಸಿದ್ದರು. ಹೀಗಾಗಿ ಪೊಲೀಸರು ತಡೆದು ಎಚ್ಚರಿಕೆ ನೀಡಿದ ನಂತರ ಇದನ್ನು ಕೈಬಿಡಲಾಯಿತು. ನಂತರ ವಿದ್ಯಾರ್ಥಿನಿಯರನ್ನು ಬಸ್ ಮೂಲಕ ಕಾರ್ಯಕ್ರಮ ನಡೆಯುವ ಪುರಭವನಕ್ಕೆ ತಂದು ಬಿಡಲಾಯಿತು.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಕಾನ್ಫರೆನ್ಸ್ ನಡೆಸಲು ಅನುಮತಿ ಕೊಡಲಾಗಿತ್ತು. ರ್ಯಾಲಿಗೂ ಅನುಮತಿ ಕೇಳಿದ್ದರು. ಆದರೆ ಅನುಮತಿ ನೀಡಿರಲಿಲ್ಲ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ಸರ್ಕಲ್ನಿಂದ ರ್ಯಾಲಿ ನಡೆಸುವ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ರ್ಯಾಲಿಗೆ ಪೂರ್ವ ಅನುಮತಿ ಇಲ್ಲದ ಕಾರಣ ನಡೆಸಲು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.