ಮಂಗಳೂರು:ಪಿಪಿಇ ಕಿಟ್ ಧರಿಸಿ ಕೆಲಸ ಮಾಡಬೇಕು, ಪಿಪಿಇ ಕಿಟ್ ಧರಿಸಿದ ಬಳಿಕ ನೀರು ಕುಡಿಯಲು, ಶೌಚಾಲಯಕ್ಕೆ ತೆರಳಲು ಅವಕಾಶವಿಲ್ಲ. ಬೆಳಗ್ಗೆಯಿಂದ ರಾತ್ರಿ 9 ಗಂಟೆಯಿಂದ ಕೆಲಸ ಮಾಡಬೇಕು. ಆದರೂ, ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡಿದ್ದೇನೆ.
ಇದು ಸಿಂಗಾಪುರದಲ್ಲಿ ಸಿಲುಕಿದ್ದ ಸುಮಾರು 150 ಕನ್ನಡಿಗರನ್ನು ಬೆಂಗಳೂರಿಗೆ ಕರೆತಂದ ವಂದೇ ಭಾರತ್ ಮಿಷನ್ನ ಪ್ರಥಮ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಕಾರ್ಯನಿರ್ವಹಿಸಿದ ಕೊಣಾಜೆ ಮೂಲದ ಅಶ್ವಿನಿ ಪೂಜಾರಿಯವರ ಮಾತು.
ಬಹಳಷ್ಟು ಜನರು ನನ್ನಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಅದಕ್ಕೆ ಉತ್ತರ ನೀಡುವ ಸಲುವಾಗಿ ತಾನು ಈ ವಿಡಿಯೋ ಮಾಡಿದ್ದೇನೆ ಎಂದು ಹೇಳಿರುವ ಅಶ್ವಿನಿ, ಕೊರೊನಾ ವಾರಿಯರ್ ಆಗಿ ಆಯ್ಕೆಯಾಗಿರುವ ಬಗ್ಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ಏರ್ ಇಂಡಿಯಾವೇ ನಮ್ಮನ್ನೆಲ್ಲಾ ಆಯ್ಕೆ ಮಾಡಿದೆ. ನಾನು ಕೆಲಸ ಮಾಡಿರೋದು ಬೆಂಗಳೂರಿನಿಂದ ವಂದೇ ಭಾರತ್ ಮಿಷನ್ನಲ್ಲಿ ಕಾರ್ಯಾಚರಣೆ ನಡೆಸಿದ ಮೊದಲ ವಿಮಾನದಲ್ಲಿ. ನಮ್ಮ ಬೇಸ್ನಲ್ಲಿ ಕ್ಯಾಬಿನ್ ಕ್ರೂ ಆಗಿ ಸುಮಾರು 150 ಜನ ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ ನಾಲ್ವರನ್ನು ಮಾತ್ರ ಆಯ್ಕೆ ಮಾಡಿದ್ದರು. ಈ ಮೂಲಕ ಬೆಂಗಳೂರಿನಿಂದ ಸಿಂಗಾಪುರ, ಸಿಂಗಾಪುರದಿಂದ ಬೆಂಗಳೂರು ವಿಮಾನದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು.
ಕ್ಯಾಬಿನ್ ಕ್ರ್ಯೂ ಅಶ್ವಿನಿ ಪೂಜಾರಿ ಅಮ್ಮನಿಗೆ ಈ ಬಗ್ಗೆ ಕೂಡಲೇ ಹೇಳುವ ಸ್ಥಿತಿಯಲ್ಲಿರದೆ, ಸುಳ್ಳು ಹೇಳಬೇಕಾಯಿತು. ಆದರೆ, ಫ್ಲೈಟ್ ರೀಚ್ ಆದ ಕೂಡಲೇ ಅಮ್ಮನಿಗೆ ಕರೆ ಮಾಡಿ ಸತ್ಯ ಹೇಳಿದೆ. ಇದರಿಂದ ಅಮ್ಮನಿಗೂ ಹೆಮ್ಮೆಯೆನಿಸಿತು ಎಂದು ಹೇಳುವ ಅಶ್ವಿನಿ ಪೂಜಾರಿಗೆ, ಈ ಅವಕಾಶ ದೊರಕಿದಾಗ ಭಯ ಆಗಿಲ್ವಂತೆ, ಬದಲಿಗೆ ಇಷ್ಟು ಜನ ಕ್ಯಾಬಿನ್ ಕ್ರ್ಯೂಗಳಿರುವಾಗ ಜೂನಿಯರ್ ಆಗಿರುವ ತಾನು ಸೆಲೆಕ್ಟ್ ಆಗಿರುವ ಬಗ್ಗೆ ಹೆಮ್ಮೆಯೆನೆಸಿದೆ ಎಂದಿದ್ದಾರೆ. ನಾವುಗಳು ಈ ಕಾರ್ಯಾಚರಣೆ ಮಾಡಲೇಬೇಕು. ಇಲ್ಲ ಎಂದರೆ ನಮಗೆ ಸಂಬಳ ಸಿಗಲ್ಲ ಎಂದು ಟೀಕಿಸುವವರೂ ಇದ್ದಾರೆ. ನಾವು ಈ ಕಾರ್ಯಾಚರಣೆ ಮಾಡಿದರೆ ಮಾತ್ರ ಸಂಬಳ ಬರೋದಲ್ಲ. ಮನೆಯಲ್ಲಿದ್ದರೂ ಬೇಸಿಕ್ ಸಂಬಳ ಬರುತ್ತೆ. ಅಲ್ಲದೇ ಈ ಕಾರ್ಯಾಚರಣೆಗಿಂತ ಮೊದಲು ಏನೇ ತೊಂದರೆ ಆದರೂ ನಾವೇ ಜವಾಬ್ದಾರಿ ಎಂದು ಬರೆದು ಕೊಡಬೇಕು. ವಿಮಾನ ಹತ್ತುವ ಮೊದಲೊಂದು ಕೊರೊನಾ ಟೆಸ್ಟ್ ಹಾಗೂ ವಿಮಾನದಿಂದ ಇಳಿದ ಬಳಿಕ ನೇರವಾಗಿ ಆಸ್ಪತ್ರೆಗೆ ತೆರಳಿ ಕೊರೊನಾ ಟೆಸ್ಟ್ ಮಾಡಬೇಕು. 5 ದಿವಸದ ಬಳಿಕ ಮತ್ತೊಂದು ಟೆಸ್ಟ್ ಮಾಡಬೇಕು. ಆದ್ದರಿಂದ ನಮ್ಮ ಪರಿಸ್ಥಿತಿಯನ್ನು ಅರಿತು ಟೀಕಿಸಿ. ವಿಮಾನದ ಪ್ರಯಾಣಿಕರಲ್ಲಿ ಭಾರತದಲ್ಲಿ ತಮ್ಮ ಹೆರಿಗೆ ಆಗಬೇಕೆಂಬ ಅಭಿಲಾಷೆ ಉಳ್ಳವರು, ತಮ್ಮ ಮಕ್ಕಳನ್ನು ನೋಡಬೇಕೆಂಬ ಹಂಬಲವುಳ್ಳ ಹೆತ್ತವರು ಇದ್ದರು. ಅವರು ಭಾರತಕ್ಕೆ ತಲುಪಿದ ಕೂಡಲೇ ನಮಗೆ ಸಲ್ಲಿಸಿದ ಹಾರೈಕೆಗಳಿಗಿಂತ ಮಿಗಿಲಾದ ಪುರಸ್ಕಾರಗಳು ಯಾವುದೂ ಇಲ್ಲ ಎಂದು ತನ್ನ ಕೆಲಸದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.