ಪುತ್ತೂರು: ಕೆಎಸ್‌ಆರ್‌ಟಿಸಿ ಸಾರಿಗೆ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಕೆಎಸ್‌ಆರ್‌ಟಿಸಿ ಪುತ್ತೂರು ಮತ್ತು ಮಂಗಳೂರು ವಿಭಾಗವನ್ನು ಸೇರಿಸಿ ಪುತ್ತೂರು ನಗರದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಅದಾಲತ್ ನಡೆಸಲಾಗುವುದು. ಅದಾಲತ್‌ನಲ್ಲಿ ಪ್ರಯಾಣಿಕರಿಂದ ಬಂದ ಸಲಹೆ, ಸೂಚನೆಗಳನ್ನು ಶೇ.85ರಷ್ಟನ್ನು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಮತ್ತು ಮಂಗಳೂರು ವಿಭಾಗ ಮಟ್ಟದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದರು. ಜನರಿಗೆ ಅವಶ್ಯಕವಾದ ಸ್ಥಳದಲ್ಲಿ ಬಸ್‌ಗಳಿಗೆ ನಿಲುಗಡೆ ನೀಡಬೇಕು. ಖಾಸಗಿ ಬಸ್‌ಗಳು ನಿಲುಗಡೆ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಕೆಎಸ್‌ಆರ್‌ಟಿಸಿ ಶಟಲ್ ಬಸ್‌ಗಳಲ್ಲೂ ಈ ರೀತಿಯ ಪದ್ಧತಿ ಜಾರಿಗೆ ಬರಬೇಕು ಎಂದರು.
ಪುತ್ತೂರು, ಸುಳ್ಯ, ಕಡಬ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರಿದ್ದಾರೆ. ಅವರ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಪುತ್ತೂರಿನಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಇದು ಸಾಧ್ಯವಾಗದಿದ್ದರೆ ಧರ್ಮಸ್ಥಳದಿಂದ ಉತ್ತರ ಕರ್ನಾಟಕದ ಊರುಗಳಿಗೆ ತೆರಳುವ ಮಾರ್ಗಸೂಚಿಯ ಬಸ್‌ಗಳ ಮಾರ್ಗಸೂಚಿಗಳನ್ನು ಪುತ್ತೂರುವರೆಗೆ ವಿಸ್ತರಿಸಿ. ಇಲ್ಲಿಂದ ಆ ಬಸ್‌ಗಳು ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವಂತೆ ವ್ಯವಸ್ಥೆ ಮಾಡಬೇಕು ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗ ಸಾರಿಗೆ ಸಂಚಲನಾಧಿಕಾರಿಯವರಿಗೆ ಶಾಸಕರು ಸೂಚಿಸಿದರು.
ಓದಿ: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಎಸ್ಡಿಟಿಯು ಪ್ರತಿಭಟನೆ
ಪ್ರಸ್ತಾವನೆ ಸಲ್ಲಿಕೆ: ಕೆಎಸ್‌ಆರ್‌ಟಿಸಿಯ ಹೊಸ ಮಾರ್ಗಸೂಚಿಗಳ ಆರಂಭದ ಕುರಿತಂತೆ 130 ಮಾರ್ಗಸೂಚಿಗಳಿಗೆ ಅನುಮತಿ ಕೋರಿ ಸಮಗ್ರ ಪ್ರಾದೇಶಿಕ ಪರವಾನಗಿ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಈಗ ಶೇ.95 ರಷ್ಟು ಬಸ್‌ಗಳ ಓಡಾಟ ಆರಂಭವಾಗಿದೆ. ತಾಲೂಕಿನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಸರಗೋಡು ತಾಲೂಕಿನ ಭಾಗದಲ್ಲಿ ಬಸ್‌ಗಳ ಓಡಾಟದ ವಿಸ್ತರಣೆ ಮಾಡಲು ರೂಟ್ ಸರ್ವೇ ಮೂಲಕ ವರದಿ ತಯಾರಿಸಲಾಗುವುದು ಎಂದು ಪುತ್ತೂರು ವಿಭಾಗ ಸಾರಿಗೆ ಸಂಚಲನಾಧಿಕಾರಿ ಮುರಳೀಧರ ಆಚಾರ್ ಸಭೆಗೆ ಮಾಹಿತಿ ನೀಡಿದರು.