ಕಡಬ (ದಕ್ಷಿಣಕನ್ನಡ) :ಇಲ್ಲಿನ ಸಾರ್ವಜನಿಕ ರುದ್ರಭೂಮಿಯಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಕಂಡು ಬಂದಿದ್ದು, ನಾಯಿಗಳು ಮೃತದೇಹದ ಭಾಗಗಳನ್ನು ಕಚ್ಚಿಕೊಂಡು ತಿರುಗಾಡುತ್ತಿದ್ದ ದಯನೀಯ ಘಟನೆ ನಡೆದಿದೆ.
ಅರೆಸುಟ್ಟ ಸ್ಥಿತಿಯಲ್ಲಿ ಮೃತ ಪತ್ತೆ, ಸ್ಥಳೀಯರ ಆಕ್ರೋಶ ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರ ಮೃತಪಟ್ಟಿದ್ದು, ಕಡಬದ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಆದರೆ, ಸಂಜೆ ವೇಳೆ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಸುಟ್ಟ ವಾಸನೆ ಬರಲಾರಂಭಿಸಿತ್ತು. ಆಗ ಸ್ಮಶಾನಕ್ಕೆ ತೆರಳಿ ನೋಡಿದಾಗ ಅರೆಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಸ್ಮಶಾನವನ್ನು ಇತ್ತಿಚಿನ ಕೆಲ ತಿಂಗಳುಗಳ ಹಿಂದೆ ಸಚಿವರಾದ ಎಸ್.ಅಂಗಾರ ಅವರ ಮುತುವರ್ಜಿಯಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ದುರಸ್ತಿ ಮಾಡಲಾಗಿತ್ತು. ಆದರೂ ಇಲ್ಲಿ ಸರಿಯಾದ ನಿರ್ವಹಣೆ ಮಾಡಲು ಯಾರನ್ನೂ ಕೂಡ ನಿಯೋಜಿಸಿಲ್ಲ. ಇದರಿಂದ ಇಂತಹ ಘಟನೆ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ದ್ವೇಷದ ದಳ್ಳುರಿಗೆ 400 ಬಾಳೆ ಗಿಡಗಳ ನಾಶ; ಕಿಡಿಗೇಡಿಗಳ ಕೃತ್ಯಕ್ಕೆ ರೈತ ಕುಟುಂಬ ಕಣ್ಣೀರು
ಅಲ್ಲದೆ ಸ್ಮಶಾನದ ಅಲ್ಲಲ್ಲಿ ಪಿಪಿಇ ಕಿಟ್ಗಳೂ ಪತ್ತೆಯಾಗಿದ್ದು, ಈ ಸ್ಮಶಾನವನ್ನು ಸರಿಯಾದ ರೀತಿ ನಿರ್ವಹಣೆ ಮಾಡಲು ಸ್ಥಳೀಯ ಆಡಳಿತ ವಿಳಂಬ ಮಾಡಿದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಲಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದರು.