ಮಂಗಳೂರು :ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಂತೆ ನಾಳೆಯೂ ಕಟ್ಟುನಿಟ್ಟಿನ ಬಂದ್ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
400 ವರ್ತಕರ ಜತೆಗೆ ಸಭೆಗೆ ನಿರ್ಧಾರ.. ಮನೆಗೆ ಅಗತ್ಯ ಸಾಮಾಗ್ರಿಗಳ ವಿತರಣೆಗೆ ಕ್ರಮ..
ಅಗತ್ಯ ಸೇವೆಗಳನ್ನು ಹೊರತು ಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಕಟ್ಟುನಿಟ್ಟಿನ ಬಂದ್ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಅಗತ್ಯ ಸೇವೆಗಳಾದ ಹಾಲು, ವೈದ್ಯಕೀಯ ಸೌಲಭ್ಯ, ಪೆಟ್ರೋಲ್, ಅಡುಗೆ ಅನಿಲ ವಿತರಣೆಯಲ್ಲಿ ಯಾವುದೇ ತೊಂದರೆ ಆಗಲ್ಲ. ಅಲ್ಲದೇ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸುಮಾರು 400 ಮಂದಿ ವರ್ತಕರ ಸಭೆ ಮಾಡಿ, ಮನೆ ಮನೆಗೆ ಆಹಾರ ಸಾಮಾಗ್ರಿ ಪೂರೈಕೆ ಕುರಿತು ಚರ್ಚೆ ನಡೆಸಲಾಗುವುದು. ಈಗಾಗಲೇ ಕೆಲ ಸಂಸ್ಥೆಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಆನ್ಲೈನ್ ಮೂಲಕ ಜನರೇ ಆರ್ಡರ್ ಮಾಡುವ ವ್ಯವಸ್ಥೆ ಮಾಡಲಾಗುವುದು.
ಆನ್ಲೈನ್ ಮೂಲಕ ಸಂಪರ್ಕ ಮಾಡಲು ಸಾಧ್ಯವಾಗದವರು 1077 ಸಂಖ್ಯೆಗೆ ಕರೆ ಮಾಡಿ ಅಗತ್ಯ ಸಾಮಾಗ್ರಿಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಇನ್ನು ವಲಸೆ ಕಾರ್ಮಿಕರಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ವತಿಯಿಂದ ಆಹಾರ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಕಾಸರಗೋಡು-ಮಂಗಳೂರು ಗಡಿ ಮುಚ್ಚಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ತೀರ್ಮಾನದಂತೆ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೂ ಮಾನವೀಯತೆ ದೃಷ್ಟಿಯಿಂದ ಗಡಿ ತೆರೆದರೆ 34 ಮಂದಿ ಕೊರೊನಾ ಸೋಂಕಿನ ವ್ಯಕ್ತಿಗಳಿರುವಾಗ ನಾವು ಗಡಿ ಮುಚ್ಚಲೇಬೇಕಾದ ಸ್ಥಿತಿ ಇತ್ತು. ಆದರೆ, ಆಹಾರ ವಸ್ತುಗಳ ಸರಬರಾಜಿಗೆ ಯಾವುದೇ ತೊಂದರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.