ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೋಂದಾಯಿತ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬಿ.ಸಿ.ರೋಡಿನ ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು, ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡುವಂತೆ ಹಾಗೂ ಕಲ್ಯಾಣ ಮಂಡಳಿಯು ಕೋವಿಡ್ ಪರಿಹಾರದ ಲೆಕ್ಕ ನೀಡುವಂತೆ ಒತ್ತಾಯಿಸಿದರು.
ಕಲ್ಯಾಣ ಮಂಡಳಿಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ, ಕೋವಿಡ್ ಪರಿಹಾರಕ್ಕೆ ಅರ್ಜಿ ಹಾಕಲು ಬಾಕಿ ಇರುವ ಕಾರ್ಮಿಕರಿಗೆ ಅರ್ಜಿ ಹಾಕಲು ಅವಕಾಶ ನೀಡುವಂತೆ ಕೋರಿದರು.
ಬಳಿಕ ಸಂಘಟನೆಯ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಕಾರ್ಮಿಕ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸದ್ದಿದ್ದರೆ ಎಲ್ಲಾ ಕಟ್ಟಡ ಕಾರ್ಮಿಕರನ್ನು ಒಟ್ಟು ಸೇರಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಉದಯಕುಮಾರ್ ಬಂಟ್ವಾಳ, ಸುರೇಂದ್ರ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್, ಮಹಮ್ಮದ್ ಹನೀಫ್, ದಿನೇಶ್ ಆಚಾರಿ ಮಾಣಿ, ಲಿಯಾಕತ್ ಖಾನ್ ಮೊದಲಾದವರಿದ್ದರು.