ಪುತ್ತೂರು:ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಅಮಾನುಷ ಹಲ್ಲೆ ಅಕ್ಷಮ್ಯ ಅಪರಾಧವಾಗಿದೆ. ಈ ಪ್ರಕರಣದ ಪ್ರಮುಖ ವ್ಯಕ್ತಿ ಆಗಿರುವ ಡಿವೈಎಸ್ಪಿ ಅವರನ್ನು ತಕ್ಷಣ ಸಸ್ಪೆಂಡ್ ಮಾಡಬೇಕು. ಆತನ ಅಮಾನತು ಆಗುವ ತನಕ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂತ್ರಸ್ತರನ್ನು ಶನಿವಾರ ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇಂದು ಆಡಳಿತಕ್ಕೆ ಬಂದಿದೆ. ಶ್ರೀರಾಮಸೇನೆಯಿಂದ ರಾಜ್ಯದ ಗೃಹಮಂತ್ರಿ ಆಗುವವರಿಗೆ ಮನವಿ ಕೊಟ್ಟು ಪ್ರಕರಣದಲ್ಲಿ ನೇರ ಭಾಗಿಯಾದ ಇಲಾಖಾಧಿಕಾರಿ ಮತ್ತು ಅದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗುವುದು. ಈ ಪ್ರಕರಣದ ಮೂಲ ವ್ಯಕ್ತಿ ಡಿವೈಎಸ್ಪಿ ಆಗಿದ್ದು, ಅವರನ್ನು ಸಸ್ಪೆಂಡ್ ಮಾಡುವವರೆಗೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಗೃಹಸಚಿವರಿಗೆ ತಿಳಿಸುತ್ತೇವೆ ಎಂದು ಹೇಳಿದರು.
ಪುತ್ತೂರಿನಲ್ಲಿ ನಡೆದ ಈ ಘಟನೆ ಅತ್ಯಂತ ಅಮಾನುಷ. ಹಲ್ಲೆಗೊಳಗಾದವರು ಬಾಲ್ಯದಿಂದಲೇ ಸ್ವಯಂಸೇವಕರಾಗಿ ಸಿದ್ಧಾಂತಕ್ಕೆ ಬದ್ಧರಾಗಿ ದುಡಿದವರಾಗಿದ್ದಾರೆ. ಬ್ರಿಟಿಷರ ಮಾದರಿ ಅವರ ಮೇಲೆ ಕೌರ್ಯ ಮೆರೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಬ್ಯಾನರ್ಗೆ ಚಪ್ಪಲಿ ಹಾರ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ಸಾರ್ವಜನಿಕರಲ್ಲಿ ಪ್ರವೇಶ ಮಾಡಿದಾಗ ಹೂವಿನ ಹಾರ ಹಾಕಿಕೊಳ್ಳುವುದಕ್ಕೂ ಸಿದ್ಧರಿರಬೇಕು. ಚಪ್ಪಲಿ ಹಾರ ಹಾಕಿಕೊಳ್ಳಲೂ ಸಿದ್ಧವಾಗಿರಬೇಕು. ಮಾನ ಅಪಮಾನ ಸನ್ಮಾನ ಎಲ್ಲವನ್ನೂ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಚ್ಚಾಟದಿಂದ ಮೂರನೇ ವ್ಯಕ್ತಿಗೆ ಲಾಭ:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯದ್ದು ಒಂದು ಕೈಯಾದರೆ ಇನ್ನೊಂದು ಕೈ ಇದರ ಹಿಂದೆ ಇದೆ ಎಂದ ಮುತಾಲಿಕ್, ಈ ಕಾರ್ಯಕರ್ತರೇನು ಭಯೋತ್ಪಾದಕರೇ.. ನಕಲಿ ನೋಟು ಮುದ್ರಕರೇ. ಕೊಲೆಗಡುಕರೇ ದರೋಡೆಕೋರರೇ ಎಂದು ಪ್ರಶ್ನಿಸಿದರು. ಬ್ಯಾನರ್ ಹಚ್ಚಿದಕ್ಕೆ ಈ ರೀತಿ ಕೌರ್ಯ ಮೆರೆದಿರುವುದಕ್ಕೆ ಲಕ್ಷಾಂತರ ಮಂದಿಯ ಶಾಪ ನಿಮಗೆ ತಟ್ಟಲಿದೆ. ಇಲಾಖೆಯಲ್ಲಿದ್ದವರು ಈ ರೀತಿ ಮಾತು ಕೇಳಿಕೊಂಡು ಕಾನೂನು ಮೀರಿ ವರ್ತಿಸುವ ಮೂಲಕ ಅತ್ಯಂತ ದೊಡ್ಡ ತಪ್ಪು ಮಾಡಿದ್ದೀರಿ ಎಂದು ಕಿಡಿ ಕಾರಿದರು.
ತಪ್ಪು-ಒಪ್ಪುಗಳನ್ನು ಒಟ್ಟಿಗೆ ಕುಳಿತು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಹಿಂದೂಗಳ ನಡುವಿನ ಈ ಕಚ್ಚಾಟದಿಂದ ಮೂರನೇ ವ್ಯಕ್ತಿಗೆ ಲಾಭವಾಗುತ್ತಿದೆ ಎಂಬ ಪ್ರಜ್ಞೆ ರಹಿತ ಘಟನೆ ಇದಾಗಿದೆ. ಈ ಅಟ್ಟಹಾಸ ಬೇರೆಯವರಿಗೆ ಖುಷಿಕೊಡುತ್ತಿದೆ. ಪುತ್ತೂರು ಕ್ಷೇತ್ರ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದೆ. ಇಲ್ಲಿ ಅಸೂಯೆ, ಸೇಡು ಇಟ್ಟುಕೊಳ್ಳುವಂತಹದ್ದು ಶೋಭೆ ತರುವಂತದ್ದಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಕರಣ ಮುಚ್ಚಿಹಾಕುವ ತಂತ್ರಗಾರಿಕೆ ಬೇಡ. ಬೇರೆಯವರ ಮೇಲೆ ಕೆಸರೆರೆಚುವ, ತಪ್ಪುಹೊರಿಸುವ ಕೆಲಸ ಮಾಡಿ ಅಪಹಾಸ್ಯಕ್ಕೊಳಗಾಗಬೇಡಿ. ಹಿಂದೂಗಳ ನಡುವಿನ ಕಚ್ಚಾಟದಿಂದಾಗಿ ಬೇರೆಯವರು ನಗುವಂತಾಗಿದೆ. ಈ ವಿದ್ಯಮಾನ ಬೇರೆಯವರಿಗೆ ಖುಷಿಕೊಡುತ್ತಿದೆ. ದ್ವೇಷ ಅಸೂಯೆ ಕ್ಷೇಮ ತರುವಂತದ್ದಲ್ಲ ಎಂದು ಅವರು, ಪ್ರಭಾಕರ್ ಭಟ್ ಕಾಂಗ್ರೆಸ್ ಬಗ್ಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಮುತಾಲಿಕ್ ವಕೀಲ ಹರೀಶ್ ಅಧಿಕಾರಿ, ಚಿತ್ತರಂಜನ್ ದಾಸ್, ಸುಭಾಶ್ ಹೆಗ್ಡೆ, ರೂಪಾ ಶೆಟ್ಟಿ, ಸುಧೀರ್ ಆಚಾರ್, ಸಂತೋಷ್ ಮತ್ತಿತರರು ಇದ್ದರು.
ಇದನ್ನೂಓದಿ:ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಮಾಜಿ ಸಿಎಂ ಬೊಮ್ಮಾಯಿ..!