ಸುಬ್ರಹ್ಮಣ್ಯ : ಇಂದು ಬೆಳಗ್ಗೆ ಧನುಲಗ್ನದ ಶುಭ ಮೂಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶ್ರೀಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರುಗಿದ ಬ್ರಹ್ಮರಥೋತ್ಸವ ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವ ಸೇವೆಗೆ ಈ ಸಲ ನಿರ್ದಿಷ್ಟ ಭಕ್ತರು ಸೇವಾರ್ಥಿಗಳಾಗಿ ನೋಂದಣಿ ಮಾಡಿದ್ದರು. ಬ್ರಹ್ಮ ರಥೋತ್ಸವದ ಮೊದಲು ದೇವಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರಿಗೆ ವಿಶೇಷ ಪೂಜೆಗಳು ನೆರವೇರಿತು. ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷಪೂಜೆ ನೆರವೇರಿತು.
ದೇವರು ಗರ್ಭಗುಡಿಗೆ ಪ್ರವೇಶಿಸಿದ ಅನಂತರ ಪ್ರಧಾನ ಅರ್ಚಕರು ಭಕ್ತರಿಗೆ ಮೂಲಪ್ರಸಾದ ವಿತರಿಸಿದರು.
ಓದಿ: ಕುಕ್ಕೆಯಲ್ಲಿ ಜರುಗಿದ ಪಂಚಮಿ ತೇರು ಉತ್ಸವ, ಆಕರ್ಷಕ ಬೆಡಿ ಉತ್ಸವ
ಚಂಪಾಷಷ್ಠಿ ಹಿನ್ನೆಲೆ :
ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನವನ್ನು ಚಂಪಾಷಷ್ಠಿ ಅಥವಾ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯೆಂದು ಕರೆಯುತ್ತಾರೆ. ಈ ದಿನ ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ ಎಂಬುದು ಐತಿಹ್ಯ. ಈ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ಶುಭ ಮುಹೂರ್ತದಲ್ಲಿ ಬ್ರಹ್ಮರಥಾರೋಹಣ ಮಾಡಿಸಲಾಗುತ್ತದೆ. ಇದಕ್ಕೆ ಮೊದಲಾಗಿ ಶ್ರೀ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗುತ್ತಾರೆ. ಶ್ರೀ ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿ ಆಕಾಶದಲ್ಲಿ ಗರುಡನು ಬಂದು ಮೂರು ಪ್ರದಕ್ಷಿಣೆ ಹಾಕುತ್ತಾನೆ ಎಂಬುದು ಇಲ್ಲಿನ ನಂಬಿಕೆ.
ಇನ್ನು ಬ್ರಹ್ಮರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.