ಮಂಗಳೂರು: 'ಒಂದೇ ಜಾತಿ, ಒಂದೇ ಮತ, ಒಂದೇ ದೇವರು' ಎಂಬ ತತ್ವಸಂದೇಶವನ್ನು ಲೋಕಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿಯ ಪ್ರಯುಕ್ತ ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸಂಭ್ರಮದಿಂದ ನಾರಾಯಣ ಗುರುಗಳ ಆರಾಧನೆ ನಡೆಯುತ್ತಿದೆ.
ಕೇರಳದ ಚೆಂಬಳತಿ ಎಂಬ ಹಳ್ಳಿಯಲ್ಲಿ ಈಳವ ಕುಟುಂಬದಲ್ಲಿ ಕ್ರಿ.ಶ. 1856ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನನವಾಯಿತು. ಶೂದ್ರ ವರ್ಗದ ಅದರಲ್ಲೂ ಈಳವ, ಬಿಲ್ಲವ ಸಮುದಾಯದವರಿಗೆ ದೇವಾಲಯ ಪ್ರವೇಶವಿರದ ಕಾಲದಲ್ಲಿ ಎಲ್ಲಾ ವರ್ಗಗಳಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ಒಟ್ಟು 43ಕ್ಕೂ ಅಧಿಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಎಲ್ಲಾ ಜನಾಂಗದವರಿಗೂ ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದರು. ಇಂತಹ ದೇವಾಲಯಗಳಲ್ಲಿ ಕುದ್ರೋಳಿಯ ಗೋಕರ್ಣನಾಥ ದೇವಾಲಯವೂ ಒಂದು.
ಕರಾವಳಿಯಲ್ಲಿಯೂ ಬಿಲ್ಲವ ಸಮಾಜದವರು ದೇವಾಲಯ ಪ್ರವೇಶವಿಲ್ಲದೆ ತುಳಿತಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಹೊಯಿಗೆ ಬಜಾರ್ನಲ್ಲಿದ್ದ ಶ್ರೀಮಂತ ವ್ಯಾಪಾರಿ ಕೊರಗಪ್ಪ ಎಂಬವರು ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಮೇಸ್ತ್ರಿ, ಅಮ್ಮಣ್ಣ ಮೇಸ್ತ್ರಿ ಹಾಗೂ ಗುತ್ತಿಗೆದಾರ ದೂಮಪ್ಪ ಎಂಬ ಬಿಲ್ಲವ ಮುಖಂಡರೊಂದಿಗೆ ಕೇರಳಕ್ಕೆ ತೆರಳಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾಗಿ ಮಂಗಳೂರಿನಲ್ಲಿಯೂ ಬಿಲ್ಲವರ ಪ್ರವೇಶಕ್ಕೆ ದೇವಾಲಯ ನಿರ್ಮಿಸಿಕೊಡಬೇಕೆಂದು ಬಿನ್ನವಿಸಿಕೊಂಡರು.