ಬೆಳ್ತಂಗಡಿ:ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ನಡೆಯತ್ತಿರುವುದು ವಿಶ್ವಕ್ಕೇ ಸಂತೋಷ ತಂದಿದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ಇಂದು ಭವ್ಯವಾದ ಸೂರ್ಯವಂಶದ ಚಕ್ರವರ್ತಿ ಶ್ರೀ ರಾಮಚಂದ್ರ ದೇವರಿಗೆ ಮಂದಿರ ನಿರ್ಮಾಣದ ಶಿಲಾನ್ಯಾಸ ನಡೆಯಲಿರುವುದು ಸಂತೋಷವನ್ನು ತಂದಿದೆ. ಹಿಂದೂ ಧರ್ಮದಲ್ಲಿ ಆರಾಧನೆಗೆ ಅನೇಕ ದೇವಾನು ದೇವತೆಗಳು ಇದ್ದಾರೆ. ಅದರೆ ಅಗ್ರಗಣ್ಯ ಸ್ಥಾನ ಪಡೆದದ್ದು ಶ್ರೀ ರಾಮಚಂದ್ರ. ಯಾಕೆಂದರೆ ಮಾನವ ತನ್ನ ಜೀವನದ ಎಲ್ಲಾ ಆಯಾಮಗಳಲ್ಲಿ ಶ್ರೀರಾಮನ ಸ್ಮರಣೆಯನ್ನು ಮಾಡುವುದು ಕಂಡುಬರುತ್ತದೆ.
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಗುವಿನ ಹುಟ್ಟಿನಿಂದ ಹಿಡಿದು ಸಾಯುವ ತನಕ ಪ್ರತೀ ಹಂತದಲ್ಲಿ ಜನರಿಗೆ ಶೀಘ್ರವಾಗಿ ಬಾಯಿಯಲ್ಲಿ ಬರುವ ಶಬ್ದ "ರಾಮ" ಆಗಿರುತ್ತದೆ. ಮಗುವಿನ ಜನನ ಆಗುವಾಗಲೂ ಮನೆಯವರಲ್ಲಿ ರಾಮ ರಾಮ ಅನ್ನುವುದು ರೂಢಿ. ಒಬ್ಬ ವ್ಯಕ್ತಿ ಆಸ್ಪತ್ರೆಗೆ ಹೋದರೆ ಅಲ್ಲಿ ರೋಗಿ ತುಂಬಾ ಕಷ್ಟದಲ್ಲಿದ್ದಾಗಲೂ ಡಾಕ್ಟರ್ ಸಮೇತ ನಾವು ಕೂಡಾ ರೋಗಿಯ ಸಂಕಷ್ಟಕ್ಕೆ ರಾಮ ರಾಮ ಅನ್ನುವುದು ರೂಢಿ. ಸತಿ-ಪತಿಯಾಗಿ ಮದುವೆ ಮಂಟಪ ಪ್ರವೇಶ ಆಗುವಾಗಲೂ ಪುರೋಹಿತರ ನುಡಿ ಸೀತಾ-ರಾಮನಂತೆ ಬಾಳನ್ನು ನಡೆಸಿ ಎಂಬುದಾಗಿರುತ್ತದೆ. ಹಾಗೇನೆ ಸಾಯುವಾಗ ರಾಮ ರಾಮ ಎಂಬ ಮಂತ್ರ ಜಪ ಮಾಡುವುದು ಕಂಡುಬರುತ್ತದೆ ಎಂದರು.
ಈ ಎಲ್ಲಾ ಕಾರಣದಿಂದ "ಶ್ರೀ ರಾಮ ಜಯ ರಾಮ ಜಯಜಯ ರಾಮ ಎಂಬ ಮಂತ್ರ ಜಪವನ್ನು ನಿತ್ಯ ನಿರಂತರ ಕನ್ಯಾಡಿ ರಾಮ ಕ್ಷೇತ್ರದಲ್ಲಿ ಸುಮಾರು 60 ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತೇವೆ. ನಮ್ಮ ಕ್ಷೇತ್ರದ ಈ ಪುಣ್ಯ ಭೂಮಿಗೆ ಪ್ರಭು ಶ್ರೀ ರಾಮಚಂದ್ರ ದೇವರು ಸೀತಾನ್ವೇಷಣೆಯ ಸಂದರ್ಭದಲ್ಲಿ ಬಂದು ಒಂದು ದಿವಸ ತಂಗಿ ಋಷಿ- ಮುನಿಗಳೊಂದಿಗಿದ್ದು ತನ್ನ ಅನುಷ್ಠಾನವನ್ನು ಮಾಡಿದರು ಎಂಬುದು ಇತಿಹಾಸ. ಆ ಕಾರಣದಿಂದ ಇಂದು ಅಯೋಧ್ಯೆ ಯಲ್ಲಿ ಶ್ರೀ ರಾಮಚಂದ್ರ ದೇವರ ಭವ್ಯ ಮಂದಿರ ನಿರ್ಮಾಣದ ಶಿಲಾನ್ಯಾಸ ಆಗುವುದು ನಮಗೆಲ್ಲ ತುಂಬಾ ಸಂತೋಷವನ್ನು ತಂದಿದೆ ಎಂದರು.
ಜಗತ್ತು ಇವತ್ತು ಕೋವಿಡ್ ಭಯದಿಂದ ತತ್ತರಿಸಿದೆ. ಈ ಲೋಕದಲ್ಲಿ ಸುಖ-ದುಃಖ, ಶಾಂತಿ- ಆಶಾಂತಿ ಚಕ್ರದ ಹಾಗೆ ತಿರುಗುತ್ತಾ ಇರುತ್ತದೆ. ಆದ್ದರಿಂದ ಅಯೋಧ್ಯೆಯಲ್ಲಿ ಭಗವಂತನ ಭವ್ಯ ಮಂದಿರ ನಿರ್ಮಾಣದ ಸಂಕಲ್ಪದಿಂದ ಈ ದೇಶದ ಸಮಸ್ತ ಪ್ರಜೆಗಳ ಕಷ್ಟ-ಕಾರ್ಪಣ್ಯ, ರೋಗ- ರುಜಿನೆ, ದುಃಖಗಳು ನಾಶವಾಗಿ ಸುಖ ನೆಮ್ಮದಿ ಹಾಗೂ ಸಾಮರಸ್ಯದಿಂದ ಕೂಡಿದ ಒಂದು ಉತ್ತಮ ಪ್ರಜೆಗಳನ್ನು ಹೊಂದಿದ ವಿಶ್ವದಲ್ಲೇ ಪ್ರಬಲ ರಾಷ್ಟ್ರವಾಗಿ ಮೂಡಿ ಬರಲಿ ಎಂದು ಶ್ರೀಗಳು ಶುಭ ಹಾರೈಸಿದರು.