ಕರ್ನಾಟಕ

karnataka

ETV Bharat / state

ತಂದೆಯಿಂದಲೇ ಮಗನಿಗೆ ಗುಂಡು ಪ್ರಕರಣ: ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಸಾವು

ಮಂಗಳೂರಿನಲ್ಲಿ ಕಾರ್ಮಿಕರು ತಮ್ಮ ವೇತನ ನೀಡುವ ವಿಚಾರದಲ್ಲಿ ನಡೆದ ಗೊಂದಲದ ವೇಳೆ ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮೃತಪಟ್ಟಿದ್ದಾನೆ.

boy-dead-who-injured-in-firing-by-his-father
ತಂದೆಯಿಂದಲೇ ಮಗನಿಗೆ ಗುಂಡು ಪ್ರಕರಣ: ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಸಾವು

By

Published : Oct 8, 2021, 12:04 PM IST

ಮಂಗಳೂರು:ತಂದೆಯಿಂದಲೇ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಮಗ ಇಂದು ಸಾವನ್ನಪ್ಪಿದ್ದಾನೆ. ಎಸ್​ಎಸ್​ಎಲ್​ಸಿ ವಿದ್ಯಾಭ್ಯಾಸ‌‌ ಮಾಡುತ್ತಿದ್ದ ಸುಧೀಂದ್ರ (16) ಮೃತ ಬಾಲಕ.

ಅಕ್ಟೋಬರ್ 5ರಂದು ಮಂಗಳೂರಿನ ಮಾರ್ಗನ್ ಗೇಟ್ ಬಳಿ ಈತ ತನ್ನ ತಂದೆಯ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಮೆದುಳು ಮರುದಿನವೆ ನಿಷ್ಕ್ರಿಯವಾಗಿತ್ತು. ಆರಂಭದಲ್ಲಿ ಅಂಗಾಂಗ ದಾನಕ್ಕೆ ನಿರ್ಧರಿಸಲಾಗಿತ್ತಾದರೂ, ಬಳಿಕ ಕೈಬಿಡಲಾಗಿತ್ತು. ಆಸ್ಪತ್ರೆಯಲ್ಲಿ ಇಂದು ಸುಧೀಂದ್ರ ಮೃತಪಟ್ಟಿದ್ದಾನೆ.

ಘಟನೆಯ ವಿವರ:

ಅಕ್ಟೋಬರ್ 5ರಂದು ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್​ನ ಇಬ್ಬರು ಕಾರ್ಮಿಕರು ತಮ್ಮ ವೇತನ ನೀಡುವ ವಿಚಾರದಲ್ಲಿ ಕಚೇರಿಯಲ್ಲಿ ಗೊಂದಲ ಸೃಷ್ಟಿಸಿದ್ದರು. ಈ ಸಂದರ್ಭದಲ್ಲಿ ಮಾಲೀಕ ರಾಜೇಶ್ ಪ್ರಭು ಅವರ ಪತ್ನಿ ಕಚೇರಿಯಲ್ಲಿದ್ದು, ಅವರು ತಮ್ಮ ಮಗನಿಗೆ ಪೋನ್ ಮಾಡಿ ತಂದೆಯೊಂದಿಗೆ ಕಚೇರಿಗೆ ಬರುವಂತೆ ತಿಳಿಸಿದ್ದರು. ಕಚೇರಿ ಹಿಂಭಾಗದಲ್ಲಿರುವ ಮನೆಯಿಂದ ಬಂದ ಮಾಲೀಕ ರಾಜೇಶ್ ಪ್ರಭು ಮತ್ತು ಸುಧೀಂದ್ರ ಅವರು, ನೋಡಿದಾಗ ಕಚೇರಿಯ ಗೇಟ್ ಹೊರಗಡೆ ಕಾರ್ಮಿಕರು ಗೊಂದಲ ಸೃಷ್ಟಿಸಿರುವುದು ಕಂಡುಬಂದಿತ್ತು.

ಸುಧೀಂದ್ರ

ಈ ಸಂದರ್ಭದಲ್ಲಿ ಪುತ್ರ ಸುಧೀಂದ್ರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ. ಗೊಂದಲ ನೋಡಿ ಕೋಪಗೊಂಡ ಮಾಲೀಕ ರಾಜೇಶ್ ಪ್ರಭು ತನ್ನ ಕಿಸೆಯಲ್ಲಿದ್ದ ಪಿಸ್ತೂಲ್ ತೆಗೆದು ಎರಡು ಸುತ್ತು ಫೈರಿಂಗ್ ಮಾಡಿದ್ದರು. ಆಗ ಒಂದು ಬುಲೆಟ್ ಸುಧೀಂದ್ರನ ತಲೆಗೆ ತಗುಲಿತ್ತು. ಗಂಭೀರ ಗಾಯಗೊಂಡ ಸುಧೀಂದ್ರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಮೆದುಳು ನಿಷ್ಕ್ರಿಯವಾಗಿತ್ತು. ಇದೇ ವೇಳೆ ರಾಜೇಶ್ ಪ್ರಭುಗೂ ಹೃದಯಾಘಾತ ಸಂಭವಿಸಿತ್ತು.

ಪ್ರಕರಣ ಸಂಬಂಧ ನಿನ್ನೆ ರಾಜೇಶ್ ಪ್ರಭು ಅವರನ್ನು ಬಂಧಿಸಲಾಗಿದೆ. ಗುಂಡೇಟು ತಿಂದ ಪುತ್ರ ಸುಧೀಂದ್ರ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಂತ್ಯ: ದಾಖಲೆಗಳ ಪರಿಶೀಲನೆ, ಮುಂದೇನು?

ABOUT THE AUTHOR

...view details