ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ಶನಿವಾರ ಸಂಜೆ ಉಂಟಾದ ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನ ಮೂಡಿದೆ. ಘಟನಾ ಸ್ಥಳಕ್ಕೆ ಇಂದು ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ತನಿಖೆ ನಡೆಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಗರೋಡಿ ಬಳಿ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಉತ್ತರ ಪ್ರದೇಶ ಮೂಲದ ಕಾರ್ಮಿಕ ಎನ್ನಲಾದ ವ್ಯಕ್ತಿ ನಿನ್ನೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿತ್ತು. ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹುಬ್ಬಳ್ಳಿ ಯುವಕನ ಹೆಸರಿನ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆತನಲ್ಲಿದ್ದ ಬಾಕ್ಸ್ ಮತ್ತು ಬ್ಯಾಗ್ನಿಂದಲೇ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
KA 19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿದೆ. ನಿನ್ನೆ ಸಂಜೆ 4.29ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಭಾರಿ ಪ್ರಮಾಣದಲ್ಲಿ ಹೊಗೆ ಹಬ್ಬಿತ್ತು. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಪ್ರಯಾಣಿಕನೋರ್ವ ಹತ್ತಿದ್ದ. ಸ್ಫೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಆತ ಸದ್ಯ ಗಂಭೀರ ಸ್ಥಿತಿಯಲ್ಲಿದ್ದು, ಚಾಲಕ ಸೇರಿ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.