ಕರ್ನಾಟಕ

karnataka

By

Published : Apr 19, 2021, 8:27 PM IST

ETV Bharat / state

ಓಟ ನಿಲ್ಲಿಸಿದ ಕಂಬಳದ ಹ್ಯಾಟ್ರಿಕ್ ಚಾಂಪಿಯನ್ 'ಬೋಳಂತೂರು ಕಾಟಿ'

ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ಕೋಣ, ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿಯ ಹ್ಯಾಟ್ರಿಕ್ ವೀರ ಬೋಳಂತೂರು ಕಾಟಿ ಎಂದೇ ಖ್ಯಾತವಾಗಿರುವ ಇಹಲೋಕ ತ್ಯಜಿಸಿದೆ.

Bolanthur kaati
ಬೋಳಂತೂರು ಕಾಟಿ

ಬಂಟ್ವಾಳ(ದ.ಕ):ಕಂಬಳದ ಕೋಣ, ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿಯ ಹ್ಯಾಟ್ರಿಕ್ ವೀರ 'ಬೋಳಂತೂರು ಕಾಟಿ' ಎಂದೇ ಖ್ಯಾತವಾಗಿರುವ ಕಂಬಳ ಕೋಣ ಇಹಲೋಕ ತ್ಯಜಿಸಿದೆ.

ಕಂಬಳ ಕ್ಷೇತ್ರದಲ್ಲಿ 'ಬೋಳಂತೂರು ಕಾಟಿ' ಎಂದೇ ಪ್ರಸಿದ್ಧಿ ಪಡೆದು ಪ್ರಶಸ್ತಿಗಳ ಸರದಾರ ಎನಿಸಿಕೊಂಡಿದ್ದ ಬಂಟ್ವಾಳದ ಬೋಳಂತೂರು ದಿ. ಗಂಗಾಧರ ರೈ ಅವರ ಯಜಮಾನಿಕೆಯ ಸುಮಾರು 28 ವರ್ಷದ ಕೋಣವಿದು. 2001ರಲ್ಲಿ ಬೋಳಂತೂರು ಗಂಗಾಧರ ರೈ ಅವರು ಕಾಟಿಯನ್ನು ಖರೀದಿಸಿದ್ದರು. ಮಾತಿಬೆಟ್ಟು ಕೋಣದೊಂದಿಗೆ ಜೋಡಿಯಾಗಿ ಪ್ರಾರಂಭದ 2 ವರ್ಷ ಅಜಿತ್‌ಕುಮಾರ್ ಜೈನ್ ಈ ಕೋಣವನ್ನು ಓಡಿಸಿದ್ದರು.

ಕಂಬಳ ಓಟದಲ್ಲಿ ಬೋಳಂತೂರು ಕಾಟಿ

ಬಳಿಕ ಅಶೋಕ್‌ಕುಮಾರ್ ಜೈನ್ ಓಡಿಸಿದ್ದು, ಈ ಸಂದರ್ಭ ಸತತ ಮೂರು ವರ್ಷಗಳ ಕಾಲ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿತ್ತು. ಬಳಿಕ ಮಂಜೇಶ್ವರ ಉದ್ಯಾವರ, ಮುನ್ನೆ, ಚಿತ್ರಾಪುರದ ಕುಟ್ಟಿ, ಬಿಳಿಯೂರು, ಗಂಗೆ ಮೊದಲಾದ ಕೋಣಗಳಿಗೆ ಜೋಡಿಯಾಗಿ ಪ್ರಶಸ್ತಿ ಪಡೆದಿದ್ದು, ಹಲವು ಮಂದಿ ಕಂಬಳ ಓಟಗಾರರು ಓಡಿಸಿದ್ದರು. `

ಬೋಳಂತೂರು ಕಾಟಿಯು ಕನೆಹಲಗೆ ವಿಭಾಗದಲ್ಲೂ ಪ್ರಶಸ್ತಿ ಪಡೆದು ಮಿಂಚಿತ್ತು. ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ದೂರವಾಗಿ ವಿಶ್ರಾಂತಿಯಲ್ಲಿದ್ದ ಬೋಳಂತೂರು ಕಾಟಿಯು ಬೋಳಂತೂರಿನಲ್ಲಿ ಭಾನುವಾರ ತಡರಾತ್ರಿ ಅಸುನೀಗಿದ್ದು, ಸೋಮವಾರ ಬೆಳಗ್ಗೆ ಅದರ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಇದರ ಅದ್ವಿತೀಯ ಸಾಧನೆಗಾಗಿ ಸುಮಾರು 3 ವರ್ಷಗಳ ಹಿಂದೆ ಪುತ್ತೂರು ಕಂಬಳದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಬೋಳಂತೂರು ಕಾಟಿಗೆ 25 ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಸಮ್ಮಾನ ಮಾಡಿರುವುದು ಸ್ಮರಣೀಯವಾಗಿದೆ. ಬಾರ್ಕೂರು ದೇವದಾಸ ಗಡಿಯಾರ್ ಅವರು ಕಾಟಿಯನ್ನು ಬಾಲ್ಯದಲ್ಲಿ ಪೋಷಿಸಿದ್ದು, ನೇಗಿಲು ಕಿರಿಯ ವಿಭಾಗದಲ್ಲಿ ಶಿರ್ವ ಕಂಬಳದಲ್ಲಿ ಮೊದಲ ಬಹುಮಾನ ಪಡೆದಿತ್ತು.

ABOUT THE AUTHOR

...view details