ಕರ್ನಾಟಕ

karnataka

ETV Bharat / state

ದೋಣಿ ದುರಂತ: ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರಕ್ಕೆ ಸೂಚನೆ - 'ತೌಕ್ತೆ' ಚಂಡಮಾರುತ

'ತೌಕ್ತೆ' ಚಂಡಮಾರುತದಿಂದ ನಡೆದ ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಎಂಆರ್​ಪಿಎಲ್ ನಿಂದ ತಲಾ 10 ಲಕ್ಷ ರೂ. ಪರಿಹಾರ ನೀಡಲು ಸರ್ಕಾರದ ವತಿಯಿಂದ ಆದೇಶಿಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್

By

Published : May 17, 2021, 6:56 PM IST

Updated : May 17, 2021, 7:10 PM IST

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಎಂಆರ್​ಪಿಎಲ್ ನಿಂದ ತಲಾ 10ಲಕ್ಷ ರೂ. ಪರಿಹಾರ ನೀಡಲು‌ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ.

'ತೌಕ್ತೆ' ಚಂಡಮಾರುತದಿಂದ ನಡೆದ ದೋಣಿ ದುರಂತದ ಬಗ್ಗೆ ಎನ್ಎಂಪಿಟಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಂಆರ್​ಪಿಎಲ್ ನಿಂದ ತಲಾ 10 ಲಕ್ಷ ರೂ. ಪರಿಹಾರ ನೀಡಲು ಸರ್ಕಾರದಿಂದ ಆದೇಶಿಸಿರುವುದಾಗಿ ಹೇಳಿದರು.

ಈ ದುರಂತದಲ್ಲಿ ಮೂವರು ಈಜಿ ದಡ ಸೇರಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದು, ಅವರ ಹುಡುಕಾಟದ ಕಾರ್ಯಾಚರಣೆ ಮುಂದುವರಿದಿದೆ. ಚಂಡಮಾರುತದ ಮುನ್ಸೂಚನೆ ಇದ್ದರೂ ಇವರು ಯಾಕೆ ದಡ ಸೇರಿಲ್ಲ ಎಂಬುದರ ಬಗ್ಗೆ ಈಗಾಗಲೇ ನಾನು ಚರ್ಚೆ ನಡೆಸಿದ್ದು, ಈ ಬಗ್ಗೆ ಸಂಶಯ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದೇನೆ. ಇದರಲ್ಲಿ ಯಾರದೇ ತಪ್ಪಿದ್ದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಟಗ್​ನಲ್ಲಿ 20 ಸಾವಿರ ಲೀ. ಡೀಸೆಲ್‌ ಇದ್ದು, ಅದು ಸಮುದ್ರ ಸೇರಿ ಕಲುಷಿತವಾಗದ ಹಿನ್ನೆಲೆ ತಕ್ಷಣ ಮತ್ತೊಂದು ಬೋಟ್ ಮೂಲಕ ಸಕ್ ಮಾಡಿ ತೆಗೆಯುವಂತೆ ಎಂಆರ್​ಪಿಎಲ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾಧ್ಯಮಗಳೊಂದಿಗಳೊಂದಿಗೆ ಮಾತನಾಡಿದ ಸಚಿವ ಆರ್​ ಅಶೋಕ್

ಚಂಡಮಾರುತದಿಂದ ಉಂಟಾಗಿರುವ ಗಾಳಿ, ಮಳೆಯ ಪರಿಣಾಮ ಪ್ರಾಕೃತಿಕ ವಿಕೋಪ ಉಂಟಾಗಿ ದ.ಕ.ಜಿಲ್ಲೆಯಲ್ಲಿ 87 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 23 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಈ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. 63 ಮನೆಗಳು ಭಾಗಶಃ ಹಾನಿಯಾಗಿದೆ. ಈ ಮನೆಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಲ್ಲದೆ 182 ಕುಟುಂಬಗಳು ಸಂಕಷ್ಟಕ್ಕೊಳಗಾಗಿದ್ದು, ಈ ಕುಟುಂಗಳಿಗೆ ತಲಾ 10ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಅಲ್ಲದೆ 168 ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು‌ ತಿಳಿಸಿದರು.

ಚಂಡಮಾರುತದ ಹಿನ್ನೆಲೆ ರಾಜ್ಯದ 22 ತಾಲೂಕುಗಳ 333 ಕಡೆಗಳಲ್ಲಿ ಹಾನಿ ಸಂಭವಿಸಿದೆ.‌ ಒಟ್ಟು ಆರು ಜನರು ಮೃತಪಟ್ಟಿದ್ದು, 2.87 ಹೆಕ್ಟೇರ್ ಭೂ ಪ್ರದೇಶಗಳಿಗೆ ಹಾನಿಯಾಗಿದೆ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಾಕೃತಿಕ ವಿಕೋಪದ ಹಾನಿ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ‌ಅಲ್ಲದೆ ಮೂರೂ ಜಿಲ್ಲಾಡಳಿತಗಳಲ್ಲಿ 106 ಕೋಟಿ ರೂ. ಇದ್ದು, ಇದನ್ನು ಖರ್ಚು ಮಾಡಲು ಸೂಚನೆ ನೀಡಲಾಗಿದೆ ಎಂದು ಆರ್.ಅಶೋಕ್ ಹೇಳಿದರು.

Last Updated : May 17, 2021, 7:10 PM IST

ABOUT THE AUTHOR

...view details