ಮಂಗಳೂರು:ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ವಹಿವಾಟು ಮತ್ಸೋದ್ಯಮ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ಹೊಂದಿದೆ. ಮೀನುಗಾರಿಕೆಯ ಈ ಉದ್ಯಮದಲ್ಲಿ ಸಾವಿರಾರು ಮಂದಿ ತೊಡಗಿಸಿಕೊಂಡಿದ್ದಾರೆ. ಕಡಲಿನಾಳಕ್ಕೆ ಹೋಗಿ ಮೀನುಗಾರಿಕೆ ನಡೆಸುವಾಗ ಕಡಲಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಶೀಘ್ರ ಚಿಕಿತ್ಸೆಗೆ ಕರೆದುಕೊಂಡು ಬರುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ಹೊಸ ಪ್ರಯತ್ನವೊಂದನ್ನು ಮಾಡಿದೆ.
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ವೇಳೆ ಮೀನುಗಾರರಿಗೆ ಅಪಾಯವಾದರೆ ರಕ್ಷಿಸಲು ಎಮರ್ಜೆನ್ಸಿ ಬೋಟ್ (ಬೋಟ್ ಆಂಬ್ಯುಲೆನ್ಸ್) ಮಾಡುವ ಯೋಜನೆಯನ್ನು ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ರೂಪಿಸಿದೆ. ಇದರ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಬೋಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಗರದ ಕಡೆಕಾರ್ ನಲ್ಲಿರುವ ಬೋಟ್ ನಿರ್ಮಾಣ ಯಾರ್ಡ್ನಲ್ಲಿ ಬೋಟ್ ಆಂಬ್ಯುಲೆನ್ಸ್ ನಿರ್ಮಾಣವಾಗುತ್ತಿದೆ. ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬೋಟ್ ಆಂಬ್ಯುಲೆನ್ಸ್ಗೆ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ಮತ್ತು ದಾನಿಗಳ ಸಹಕಾರದಿಂದ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ.
ಇದರ ನಿರ್ಮಾಣ ಕಾರ್ಯ ಮೂರು ತಿಂಗಳಲ್ಲಿ ಪೂರ್ಣಗೊಂಡು ಸೇವೆ ನೀಡಲಿದೆ. ಉಳ್ಳಾಲ ನದಿ ತೀರದಲ್ಲಿ ಇರಲಿರುವ ಈ ಆಂಬ್ಯುಲೆನ್ಸ್ ಬೋಟ್ ಸಮುದ್ರದಲ್ಲಿ ಯಾವುದೇ ಮೀನುಗಾರರು ಅಸ್ವಸ್ಥರಾಗಿದ್ದರೆ ಸ್ಥಳಕ್ಕೆ ತೆರಳಲಿದೆ. ಅಲ್ಲಿ ಅಸ್ವಸ್ಥಗೊಂಡಿರುವ ಮೀನುಗಾರನನ್ನು ಬೋಟ್ ಆಂಬ್ಯುಲೆನ್ಸ್ನಲ್ಲಿ ತೀರಕ್ಕೆ ತಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಿದೆ. ಈ ಬೋಟ್ ಆಂಬ್ಯುಲೆನ್ಸ್ನಲ್ಲಿ ಕಾರ್ಯನಿರ್ವಹಿಸಲೆಂದೇ ಮೀನುಗಾರರನ್ನು ಸನ್ನದ್ಧವಾಗಿ ಇರಿಸಲಾಗುತ್ತದೆ.