ಮಂಗಳೂರು:ಕಣ್ಣಿಲ್ಲ, ಕೈಯಿಲ್ಲ ಅಂತ ತನ್ನ ಅಂಗವೈಕಲ್ಯತೆಗೆ ಕಣ್ಣೀರು ಹಾಕುವಂತಹ ಹಲವರಿಗೆ ಮಾದರಿಯಾಗಿದ್ದಾರೆ ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರ ಅನ್ವಿತ್ ಕುಮಾರ್. ಅಂಧರಾಗಿರುವ ಇವರೀಗ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ. ಮಂಗಳೂರಿನ ಹೊರವಲಯದ ಕುಂಪಲದ ಅನ್ವಿತ್ ಕುಮಾರ್ ವಿಶೇಷ ಚೇತನ ವ್ಯಕ್ತಿ. ಇವರು ತಮ್ಮ ಅಂಗವೈಕಲ್ಯತೆಗೆ ಮರುಗಿ ಮನೆಯಲ್ಲಿ ಕುಳಿತುಕೊಂಡಿಲ್ಲ. ಕಣ್ಣಿಲ್ಲದಿದ್ದರೇನು, ಬದುಕುವ ಛಲ ಇದೆ ಎಂದುಕೊಂಡು ಸಾಧನೆ ಮಾಡಿದ್ದಾರೆ.
ಅನ್ವಿತ್ ಕುಮಾರ್ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪೂರೈಸಿದವರು. ಅಂಧರಾಗಿದ್ದುಕೊಂಡೆ ಎಂಎ ವ್ಯಾಸಂಗ ಮಾಡಿದ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದರು. ಅವರ ಆಸೆಯಂತೆ ಇದೀಗ ಅತಿಥಿ ಉಪನ್ಯಾಸಕರಾಗಿದ್ದಾರೆ. ಅದು ಕೂಡ ತಾವು ಕಲಿತ ಕಾಲೇಜಿನಲ್ಲಿಯೆ. ಅನ್ವಿತ್ ಕುಮಾರ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೀಗ ರಾಜ್ಯಶಾಸ್ತ್ರ ವಿಭಾಗಕ್ಕೆ ಅತಿಥಿ ಉಪನ್ಯಾಸಕರಾಗಿದ್ದಾರೆ. ವಾರದಲ್ಲಿ ಎರಡು ದಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅನ್ವಿತ್ ಕುಮಾರ್ ಅವರನ್ನು ಮೊದಲಿಗೆ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಯ್ಕೆ ಮಾಡಲಾಗಿತ್ತು.
ಕಳೆದ ಒಂದು ತಿಂಗಳಿನಿಂದ ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತಿಳಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಚೇರ್ಮೆನ್ ಜಯರಾಜ್ ಅಮೀನ್ ಅವರ ಮುತುವರ್ಜಿಯಿಂದ ಅನ್ವಿತ್ ಕುಮಾರ್ ಅವರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಾಧ್ಯವಾಗುತ್ತಿದೆ. ಅನ್ವಿತ್ ಕುಮಾರ್ ಅವರಿಗೆ ಕಣ್ಣು ದೃಷ್ಟಿ ಹೀನವಾಗಿದ್ದರೂ, ಅವರಲ್ಲಿ ಸಾಧಿಸಬೇಕೆಂಬ ವಿಶಾಲ ದೃಷ್ಟಿ ಕೋನವಿದೆ. ಅವರು ತಮ್ಮ ಶಿಕ್ಷಣದಲ್ಲಿ ಸಾಧನೆ ಮಾಡುತ್ತಲೆ ಮೇಲೆ ಬಂದಿದ್ದಾರೆ. ಅನ್ವಿತ್ ಕುಮಾರ್ ಅವರು ಎಸ್ಎಸ್ಎಲ್ಸಿಯಲ್ಲಿ 87 ಶೇಕಡಾ ಅಂಕ ಗಳಿಸಿದ್ದರು. ಪಿಯುಸಿಯನ್ನು ಕುದ್ರೋಳಿಯ ಗೋಕರ್ಣನಾಥೇಶ್ವರ ಪಿಯು ಕಾಲೇಜಿನಲ್ಲಿ ಮುಗಿಸಿದ ಅವರು ಅಲ್ಲಿಯೂ 88 ಶೇಕಡಾ ಪಡೆದು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದರು.