ಪುತ್ತೂರು (ದಕ್ಷಿಣ ಕನ್ನಡ): ವಿವಾಹಿತ ಮಹಿಳೆಯ ವಿಶ್ವಾಸ ಗಳಿಸಿ ಲೈಂಗಿಕವಾಗಿ ಬಳಸಿಕೊಂಡು ಪುತ್ತೂರಿನ ವ್ಯಕ್ತಿಯೊಬ್ಬ ಕೊನೆಗೆ ಮಹಿಳೆಯನ್ನೇ ಬ್ಲ್ಯಾಕ್ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಆರೋಪಿಯಾಗಿದ್ದಾನೆ.
ದೂರು ನೀಡಿದ ಮಹಿಳೆ, ಸಂಗೀತದಲ್ಲಿ ಆಸಕ್ತಿ ಇದ್ದು, ಕ್ಲಬ್ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದರು. 2020ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದರು. 2023ರ ಜನವರಿ ತಿಂಗಳಲ್ಲಿ ಆರೋಪಿ ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದನು. ಅಲ್ಲಿ ಮಹಿಳೆಯ ಮೇಲೆ ಆರೋಪಿ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಅಲ್ಲದೇ ಅದೇ ಲಾಡ್ಜ್ನಲ್ಲಿ ಈ ಘಟನೆ ಮತ್ತೊಮ್ಮೆ ಕೂಡ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಆರೋಪಿ, ಮಹಿಳೆಯೊಂದಿಗೆ ಇರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದನು. ನಂತರ ಆರೋಪಿ, ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು, ಮಹಿಳೆ ಒಮ್ಮೆ 25 ಸಾವಿರ ಹಣ ನೀಡಿದ್ದರು. ಬಳಿಕ ಆರೋಪಿಯು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿ ಸುಮಾರು ಏಳು ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಮಹಿಳೆಯ ತಾಯಿ ಹಾಗು ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರವಾರದ ಮಹಿಳಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ರೇಮ ಪ್ರಕರಣ: ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ತಾಯಿ, ಸಹೋದರ