ಕಾರವಾರ:ನೀವು ಬಂಗಾರ ಬಣ್ಣದ ಇಲ್ಲವೇ ಬಿಳಿ ಬಣ್ಣದ ಮರಳಿನ ಕಡಲ ತೀರಗಳನ್ನು ನೋಡಿರ್ತಿರಾ, ಇಲ್ಲವೇ ಕೇಳಿರ್ತಿರಾ. ಆದರೆ ಇಲ್ಲೊಂದು ಕಡಲ ತೀರ ಕಪ್ಪು ಮರಳಿನಿಂದ ಕಂಗೊಳಿಸುತ್ತಿದೆ. ದೇಶದಲ್ಲಿಯೇ ಏಕೈಕವಾಗಿ ಸಿಗುವ ಈ ಕರಿ ಎಳ್ಳಿನಂತಹ ಮರಳಿನ ಕಡಲ ತೀರ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಹೌದು, ಕಾರವಾರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮಾಜಾಳಿಯ ತೀಳ್ಮಾತಿ ಕಡಲ ತೀರ ಇಂತಹದೊಂದು ವಿಚಿತ್ರ ಕಾರಣಕ್ಕೆ ಪ್ರವಾಸಿಗರ ಕೇಂದ್ರ ಬಿಂದುವಾಗಿದೆ. ಅಪ್ಪಟ ಕರಿ ಎಳ್ಳಿನಂತೆ ಕಂಡುಬರುವ ಇಲ್ಲಿನ ಮರಳು ಪುಟ್ಟ ಕಡಲ ತೀರದುದ್ದಕ್ಕೂ ಹರಡಿಕೊಂಡಿದೆ. ಇನ್ನೂ ವಿಶೇಷ ಎಂದರೆ ಕಡಲ ತೀರದ ಎಡದಲ್ಲಿ ಮಾಜಾಳಿ ಕಡಲ ತೀರ ಹಾಗೂ ಬಲಬದಿಯ ಗೋವಾ ಗಡಿಯಲ್ಲಿ ಪೊಳೇಂ ಕಡಲ ತೀರವಿದೆ. ಈ ಎರಡು ಕಡಲ ತೀರಗಳ ಮರಳು ಬಿಳಿಯಾಗಿಯೇ ಇದೆ. ಆದರೆ ಇಲ್ಲಿನ ಮರಳು ಮಾತ್ರ ಕಪ್ಪಾಗಿದ್ದು, ಇದ್ಯಾಕೆ ಹೀಗೆ ಎನ್ನುವುದಕ್ಕೆ ಯಾರಲ್ಲಿಯೂ ಸ್ಪಷ್ಟ ಉತ್ತರವಿಲ್ಲ.
ಕಾರವಾರದ ಮಾಜಾಳಿಯ ತೀಳ್ಮಾತಿ ಕಡಲ ತೀರ ಕೊಂಕಣಿ ಭಾಷೆಯಲ್ಲಿ ತೀಳ ಎಂದರೆ ಎಳ್ಳು ಮಾತಿ ಮಣ್ಣು. ಹೀಗಾಗಿ ಎಲ್ಲೆಡೆ ತೀಳ್ಮಾತಿ ಕಡಲ ತೀರ ಎಂದೇ ಹೆಸರು ಪಡೆದುಕೊಂಡಿದೆ. ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿರುವ ಕಡಲ ತೀರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೆ ನೆರೆದಿರುತ್ತದೆ.
ಸದ್ಯ ಕಡಲ ತೀರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ಕಲ್ಪಿಸಿರುವುದನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ. ಮಾಜಾಳಿ ಕಡಲ ತೀರದಿಂದ ತೀಳ್ಮಾತಿಯವರೆಗೆ ತೂಗು ಸೇತುವೆ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿತ್ತಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ವಾಪಸ್ ಆಗಿದೆ.
ಈ ಕಾರಣದಿಂದ ಮಾಜಾಳಿ ಕಡಲ ತೀರದಿಂದ ಸುಮಾರು ಎರಡು ಕಿ.ಮೀಟರ್ವರೆಗೆ ಕಡಿದಾದ ರಸ್ತೆಯಲ್ಲಿ ಗುಡ್ಡ ಹತ್ತಿ ಇಳಿದು ಸಾಗಬೇಕು. ದಾರಿಯುದ್ದಕ್ಕೂ ಸಿಗುವ ಕಪ್ಪು ಬಂಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಕಲ್ಲುಗಳು ಅಲೆಗಳ ರಭಸಕ್ಕೆ ಸಿಕ್ಕಿ ಮರಳಾಗಿವೆ. ಈ ಮರಳೇ ಒಂದೆಡೆ ಸೇರಿ ಕಪ್ಪು ಮರಳಿನ ಕಡಲ ತೀರವಾಗಿದೆ. ಎಷ್ಟೇ ಮಳೆಯಾದರು ಕೂಡ ಅಲ್ಲಿಯೇ ಶೇಖರಣೆಯಾಗುತ್ತದೆ ಎನ್ನುತ್ತಾರೆ ಕಡಲಶಾಸ್ತ್ರಜ್ಞರು.
ಇನ್ನು ಕಡಲ ತೀರದಲ್ಲಿ ಪ್ರತಿ ನಿತ್ಯ ಸೂರ್ಯಾಸ್ತ ದೃಶ್ಯ ಮನಮೋಹಕವಾಗಿ ಮೂಡಿಬರುತ್ತದೆ. ಕಪ್ಪು ಮರಳಿನಲ್ಲಿ ಮೂಡುವ ಸೂರ್ಯನ ಕಿರಣಗಳ ಚಿತ್ತಾರ ಹೊಸ ಅನುಭವ ನೀಡುತ್ತದೆ. ಆದರೆ ಕಡಲ ತೀರವು ಎಷ್ಟು ಸೌಂದರ್ಯವನ್ನು ನೀಡುತ್ತಿದೆಯೋ ಅಷ್ಟೇ ಅಪಾಯಕಾರಿಯು ಹೌದು. ಕಡಲ ತೀರದಲ್ಲಿನ ಕಲ್ಲುಗಳು ವಿಪರಿತವಾಗಿ ಜಾರುವುದರಿಂದ ಮತ್ತು ಸಮುದ್ರ ಆಳವಾಗಿರುವುದರಿಂದ ಪ್ರವಾಸಿಗರು ಜಾಗೃತಿ ವಹಿಸುವುದು ಅವಶ್ಯವಾಗಿದೆ.