ಮಂಗಳೂರು: 2ಬಿ ರದ್ದು ವಿಚಾರ ಸಂಪೂರ್ಣ ಮೀಸಲಾತಿಯನ್ನು ರದ್ದು ಮಾಡುವ ಹುನ್ನಾರವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಇದು ಮೀಸಲಾತಿ ವಿರೋಧ ನೀತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾತ್ರಧಾರಿಯಾಗಿದ್ದು, ಬಿಜೆಪಿಯ ಸೂತ್ರಧಾರಿಗಳು ಏನು ಹೇಳುತ್ತಾರೋ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯವರು ಮೀಸಲಾತಿಯನ್ನು ಸಂಪೂರ್ಣ ರದ್ದುಗೊಳಿಸುವ ಹುನ್ನಾರ ನಡೆಸಲು ಗೊಂದಲ ಸೃಷ್ಟಿಸುತ್ತಿದ್ದಾರೆ. 2015ರಲ್ಲಿ ಆರ್ಎಸ್ಎಸ್ ಸರಸಂಚಾಲಕ ಮೋಹನ್ ಭಾಗವತ್, ನಾವು ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಬಿಹಾರದಲ್ಲಿ ಹೇಳಿಕೆಯನ್ನು ನೀಡಿದ್ದರು. ಸಂವಿಧಾನದ ಪ್ರಕಾರ ಈ ದೇಶದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲವೆಂದು ಜೋಶಿಯವರು ಹೇಳಿದ್ದರು. ಹಾಗಾಗಿ ಈ ಸೂತ್ರಧಾರಿಗಳು ಹೇಳಿದಂತೆ ಪಾತ್ರಧಾರಿ ನಾಯಕರು ಇದನ್ನು ಅನುಷ್ಠಾನ ಮಾಡುತ್ತಿದ್ದಾರೆ ಎಂದರು.
2ಬಿ ಮೀಸಲಾತಿ ರದ್ದತಿ ಅಷ್ಟೊಂದು ಸುಲಭವಲ್ಲ. ಇದು ಬ್ಯಾಕ್ ವರ್ಡ್ ಕ್ಲಾಸ್ ಕಮಿಷನ್ ಹೊರತು ಬ್ಯಾಕ್ ವರ್ಡ್ ಕಾಸ್ಟ್ ಕಮಿಷನ್ ಅಲ್ಲ. ಇದರಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಬರುತ್ತಾರೆ. 4% ಕಮಿಷನ್ ತೆಗೆದು ಬೇರೆಯವರಿಗೆ ಕೊಡಲು ಕೆಲವೊಂದು ಕಾನೂನುಗಳಿವೆ. ಆದರೆ ಅದನ್ನು ಮಾಡಿಲ್ಲ. ಇವರು ಕೇವಲ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿಯವರು ಮೊದಲು ಮೂಗಿಗೆ ತುಪ್ಪ ಹಚ್ಚುತ್ತಿದ್ದರು. ಈಗ ತಲೆಮೇಲೆಯೇ ಹಚ್ಚಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.