ಮಂಗಳೂರು: ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಬಿಜೆಪಿಯವರು ಇದೇ ನೀಚಬುದ್ದಿ ಮಾಡಿಕೊಂಡು ಹೋಗಲಿ ಎಂದು ಮಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವನಾತ್ಮಕ ನಾಟಕಕ್ಕೆ ರಾಜ್ಯದ ಜನ ಬುದ್ದಿ ಕಲಿಸಿದ್ದಾರೆ. ಅವರನ್ನು ಸೋಲಿಸಿ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಬಿಜೆಪಿಯವರ ಜೀವನ ನಡೆಯೋದು ಕೂಡ ನಮ್ಮ ಗ್ಯಾರಂಟಿ ಮೇಲೆ ಎಂದು ವ್ಯಂಗ್ಯವಾಡಿದರು.
ಸದ್ಯ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ವಾರಕ್ಕೆ ಎರಡು ಬಾರಿ ಮೊಟ್ಟೆ ಕೊಡಲಾಗ್ತಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಸರ್ಕಾರ ಇದನ್ನು ಮಾಡಿದೆ. ಶಿಕ್ಷಕರ ಕೊರತೆ ರಾಜ್ಯದಲ್ಲಿ ಇದೆ, ಅದನ್ನ ನಾವು ಸರಿ ಮಾಡ್ತೇವೆ. ಇದರ ಮಧ್ಯೆ ದಾಖಲೆ ಪ್ರಮಾಣದಲ್ಲಿ 25 ಸಾವಿರ ಶಿಕ್ಷಕರ ವರ್ಗಾವಣೆ ಆಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ನಾನು ಅಧಿಕಾರಕ್ಕೆ ಬಂದ ಕೂಡಲೇ ಮಾಡಿದೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆದಾಗಲಿ ಅಂತ ಈ ತೀರ್ಮಾನ ಮಾಡಲಾಗಿದೆ ಎಂದರು.
ಇದರಲ್ಲಿ ಬಿಜೆಪಿಯವರು ಹೇಳುವ ಯಾವುದೇ ರಾಜಕೀಯ ಇಲ್ಲ. ಈ ಬಿಜೆಪಿಯವರು ಸಭಾಧ್ಯಕ್ಷರ ಪೀಠವನ್ನೇ ಅವಮಾನಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ನಮ್ಮನ್ನು ಗೆಲ್ಲಿಸ್ತಾರೆ. ಕರಾವಳಿ ಭಾಗ ಕಲ್ಮಶ ಆಗಿದ್ದು ನಿಜ, ಆದರೆ ಮತ್ತೆ ಶಾಂತಿ ಸೌಹಾರ್ದತೆ ಬರಲಿದೆ. ನಮ್ಮ ಸರ್ಕಾರ ಅವೆಲ್ಲವನ್ನೂ ಮತ್ತೆ ತರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪೂರ್ಣವಾಗಿ ಪರಿಷ್ಕರಣೆ: ಪಠ್ಯಪುಸ್ತಕ ಪೂರ್ಣವಾಗಿ ಮತ್ತೆ ಪರಿಷ್ಕರಣೆ ಆಗಲಿದೆ. ಬಿಜೆಪಿಯವರು ಏನು ಬದಲಿಸಿದ್ದರೋ, ಅದನ್ನು ಬದಲಿಸಿ, ಮೊದಲು ಇದ್ದಿದ್ದನ್ನೂ ಈಗ ತಂದಿದ್ದೇವೆ. ತುರ್ತಾಗಿ ಈಗ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮುಂದಿನ ವರ್ಷ ಮಕ್ಕಳಿಗೆ ಅನುಕೂಲವಾಗುವಂತೆ ಬದಲಾಯಿಸ್ತೀವಿ.