ಮಂಗಳೂರು: ಬಿಜೆಪಿ ಸರ್ಕಾರದ ಎರಡನೇ ಅವಧಿಯ ಸಾಧನೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ. ಇದೀಗ ಕೇಂದ್ರ ಸರ್ಕಾರ ಮೆಸ್ಕಾಂಅನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಇದು ಬಂಡವಾಳಶಾಹಿಗಳಿಗೆ ಸಹಕಾರ ಮಾಡುವಂತಹ ಮನೋವೃತ್ತಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ, ಬಂದರು, ಜೀವ ವಿಮಾ ನಿಗಮ, ಬಿಎಸ್ಎನ್ಎಲ್, ಕಲ್ಲಿದ್ದಲು ಗಣಿ ಎಲ್ಲವನ್ನೂ ಖಾಸಗೀಕರಣ ಮಾಡಲು ಬಿಜೆಪಿ ಹೊರಟಿದೆ. ಜಿಯೋ ಕಂಪನಿಯನ್ನು ಬೆಳೆಸಲು ಮೋದಿಯವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣವೇ ಬಿಜೆಪಿಯ 2ನೇ ಅವಧಿಯ ಸರ್ಕಾರದ ಸಾಧನೆ: ರಮಾನಾಥ ರೈ ಚುನಾವಣಾ ಪೂರ್ವದಲ್ಲಿ ಹೇಳಿರುವ ಕಪ್ಪುಹಣ ತರುವುದು ಎರಡನೇ ಅವಧಿಗೂ ಸಾಧ್ಯವಾಗಿಲ್ಲ. ಯುಪಿಎ ಅಧಿಕಾರಾವಧಿಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಿದ್ದಾಗ ಜನರನ್ನು ಕೆರಳಿಸುತ್ತಿದ್ದ ಬಿಜೆಪಿಯವರು, ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪಾತಾಳಕ್ಕೆ ಇಳಿದರೂ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿಲ್ಲ. ಅದೇ ರೀತಿ ಕೊರೊನಾ ಬಂದ ಬಳಿಕ ಜಿಡಿಪಿ ಕುಸಿದಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಹಾಗಾದರೆ ಡಾಲರ್ ಮೌಲ್ಯ ಯಾಕೆ ಕುಸಿದಿಲ್ಲ. ಕೊರೊನಾ ಸೋಂಕು ಜಾಸ್ತಿ ಇರೋದು ಅಮೆರಿಕಾದಲ್ಲಿ. ಹಾಗಾದರೆ ಡಾಲರ್ ಮೌಲ್ಯ ಯಾಕೆ ಕುಸಿದಿಲ್ಲ. ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೇಂದ್ರ ಸರ್ಕಾರದ ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ ಎಂದು ಹೇಳಿದರು.
ದ.ಕ ಜಿಲ್ಲೆಯ ಪ್ರತಿಷ್ಠಿತ ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ ಬ್ಯಾಂಕ್ಗಳನ್ನು ಮಾಯ ಮಾಡುವ ಕೆಲಸ ಮೋದಿ ಸರ್ಕಾರದಿಂದ ಆಗಿದೆ. ಎರಡನೇ ಅವಧಿಯ ಬಿಜೆಪಿ ಸರ್ಕಾರದ ಮತ್ತೊಂದು ಸಾಧನೆ ರಿಸರ್ವ್ ಬ್ಯಾಂಕ್ನ ರಿಸರ್ವ್ ಹಣಕ್ಕೆ ಕೈ ಹಾಕಿರೋದು. ಮುಂದಿನ ದಿನಗಳಲ್ಲಿ ಮೋದಿಯವರ ಅವಧಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಕರಣ ಮಾಡಿರುವ ಬ್ಯಾಂಕ್ಗಳು ಮತ್ತೆ ಖಾಸಗೀಕರಣ ಆಗಲಿವೆ. ಅಲ್ಲದೆ ಭೂ ಮಸೂದೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಮತ್ತೆ ಜಮೀನ್ದಾರರಿಗೆ ಕೊಡಲಿದ್ದಾರೆ. ಇವರು ಹೋಗುವಂತಹ ದಾರಿ ನೋಡಿದರೆ ಜಮೀನ್ದಾರರ, ಶ್ರೀಮಂತರ, ಬಲಿಷ್ಠ ವರ್ಗದವರ ಪರವಾದ ಸರ್ಕಾರ ಎಂಬಂತೆ ಕಾಣುತ್ತಿದೆ. ದುರ್ಬಲ ವರ್ಗದವರ ಪರವಾಗಿರುವ ಸರ್ಕಾರ ಅಲ್ಲ ಎಂದು ಸ್ಪಷ್ಟವಾಗುತ್ತಿದೆ ಎಂದು ರಮಾನಾಥ ರೈ ಹೇಳಿದರು.