ದಕ್ಷಿಣ ಕನ್ನಡ:ಇಡೀ ಭಾರತವೇ ಕಾತರದಿಂದ ಕಾಯುತ್ತಿದ್ದ ಕರ್ನಾಟಕವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ಭದ್ರಕೋಟೆ ಎಂದೇ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಭಾರಿ ಮತ್ತೊಮ್ಮೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 6 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. 2 ಕ್ಷೇತ್ರ 'ಕೈ' ವಶವಾಗಿದೆ.
5ನೇ ಬಾರಿ ಖಾದರ್ಗೆ ಗೆಲುವು (ಮಂಗಳೂರು): ದಕ್ಷಿಣ ಕನ್ನಡದಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಕ್ಷೇತ್ರ ಮಂಗಳೂರು. ಹೆಸರಿಗೆ ಮಂಗಳೂರು ಕ್ಷೇತ್ರವಾದರೂ ಇದು ನೈಜವಾಗಿ ಮಂಗಳೂರು ನಗರದಿಂದ ಹೊರಗಿದೆ. ಉಳ್ಳಾಲ ಕ್ಷೇತ್ರವೆಂದೇ ಜನಜನಿತವಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಂಗಳೂರಿನ ಶಾಸಕರಾಗಿ 5ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇವರ ಎದುರಾಳಿಯಾಗಿ ಬಿಜೆಪಿಯಿಂದ ಸತೀಶ್ ಕುಂಪಲ ಸ್ಪರ್ಧಿಸಿದ್ದರು.
ವೇದವ್ಯಾಸ ಕಾಮತ್ಗೆ ಜಯ (ಮಂಗಳೂರು ದಕ್ಷಿಣ):ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್ ಇತ್ತು. ವೇದವ್ಯಾಸ ಕಾಮತ್ ಮತ್ತು ಜೆ.ಆರ್.ಲೋಬೋ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ 83 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡು 22 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಭರತ್ ಶೆಟ್ಟಿಗೆ ಭರ್ಜರಿ ಗೆಲುವು (ಮಂಗಳೂರು ಉತ್ತರ):ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ.ವೈ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹಿಂದಿಕ್ಕಿ 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಿಸಿದ್ದಾರೆ. ಭರತ್ ಶೆಟ್ಟಿ ಒಟ್ಟು 1,03,531 ಮತಗಳನ್ನು ಪಡೆದುಕೊಂಡಿದ್ದಾರೆ.
ರಮಾನಾಥ್ ರೈ ವಿರುದ್ಧ ಗೆದ್ದ ರಾಜೇಶ್ ನಾಯ್ಕ್ (ಬಂಟ್ವಾಳ):ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರನ್ನು ಹಿಂದಿಕ್ಕಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲುವಿನ ನಗೆ ಬೀರಿದ್ದಾರೆ. ಭಾರಿ ಪೈಪೋಟಿಯಲ್ಲಿ ಸ್ಪರ್ಧೆ ನಡೆದಿದ್ದು, ರಾಜೇಶ್ ನಾಯ್ಕ್ 8 ಸಾವಿರ ಮತಗಳ ಅಂತರದಿಂದ ಗೆದ್ದರು.
ಉಮಾನಾಥ್ ಕೋಟ್ಯಾನ್ ಜಯಭೇರಿ (ಮೂಡುಬಿದಿರೆ):ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಜಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ 22 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಉಮಾನಾಥ್ ಇದೀಗ ಮತ್ತೆ ಮೂಡುಬಿದಿರೆ ಕ್ಷೇತ್ರದಲ್ಲಿ ಗೆದ್ದು ಮತ್ತೊಮ್ಮೆ ಶಾಸಕ ಸ್ಥಾನಕ್ಕೇರಿದ್ದಾರೆ.