ಮಂಗಳೂರು :ಸಚಿವ ಜಮೀರ್ ಅಹ್ಮದ್ಗೆ ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ನಮ್ಮ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರ ಸ್ಥಾನಕ್ಕೆ ನಾವು ಶಾಸಕರು ಗೌರವ ಕೊಡುವುದು ಪ್ರಜಾಪ್ರಭುತ್ವಕ್ಕೆ ಗೌರವ ನೀಡಲು. ಸಂವಿಧಾನಕ್ಕೆ, ಆ ಸ್ಥಾನಕ್ಕೆ ಗೌರವ ನೀಡುತ್ತೇವೆ. ಆ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಜಾತಿ, ಧರ್ಮದ ಬಣ್ಣ ನೀಡುವ ಪ್ರಯತ್ನವನ್ನು ಜಮೀರ್ ಅಹ್ಮದ್ ಖಾನ್ ನಿಂದ ಆಗಿದೆ. ಇದು ತಲೆತಗ್ಗಿಸುವ ಕೆಲಸ. ಇಷ್ಟೊತ್ತಿಗೆ ಜಮೀರ್ ಅಹ್ಮದ್ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆದುಕೊಳ್ಳಬೇಕಿತ್ತು. ಮುಂದಿನ ಅಧಿವೇಶನದಲ್ಲಿ ಜಮೀರ್ ಅಹ್ಮದ್ ಯಾವ ರೀತಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ನೋಡ್ತೇವೆ. ಮುಖ್ಯಮಂತ್ರಿ ತಕ್ಷಣವೇ ಜಮೀರ್ ಅಹ್ಮದ್ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಬಿಜೆಪಿಗೆ ರಾಜ್ಯಾಧ್ಯಕ್ಷರ ನೇಮಕ ಆಗಿರಲಿಲ್ಲ. ವಿಪಕ್ಷ ನಾಯಕ ಆಯ್ಕೆ ಆಗಿರಲಿಲ್ಲ. ಪೈಪೋಟಿ, ಭಿನ್ನಾಭಿಪ್ರಾಯ ಇದೆ ಎಂದು ಚರ್ಚೆ ಆಗಿತ್ತು. ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದರು. ಆದರೆ ಇದೀಗ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ ಅವರು ನನಗೆ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.
ಮೋದಿ ನಾಯಕತ್ವವನ್ನು ಜಗತ್ತೇ ಕೊಂಡಾಡುತ್ತಿದೆ. ಒಂದು ದಿನ ರಜೆ ಪಡೆಯದೆ ಕೆಲಸ ಮಾಡಿದ ಧೀಮಂತ ನಾಯಕ ಅವರು. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಒಳ್ಳೆಯ ಕಾರ್ಯಕ್ರಮ ಕೊಟ್ಟರೂ ಸಹ ನಮ್ಮನ್ನು ಟೀಕೆ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಸರ್ಕಾರ ಬಂದ ಐದಾರು ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು ಎಂದು ವಿಜಜೇಂದ್ರ ಟೀಕಿಸಿದರು.
ರಾಜ್ಯ ಸರ್ಕಾರದ ಐದಾರು ತಿಂಗಳ ಕಾರ್ಯವೈಖರಿ ಬಡ ವಿರೋಧಿ, ದಲಿತರ, ರೈತ ವಿರೋಧಿ ಸರ್ಕಾರ ಎಂದು ಸಾಬೀತು ಮಾಡಿದೆ. ಮತ ಕೊಟ್ಟವರು ಮತ ಕೊಟ್ಟ ತಪ್ಪಿಗೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಬರದ ಸಂದರ್ಭದಲ್ಲಿ ನಿರ್ವಹಣೆ ಮಾಡಲು ಸರ್ಕಾರ ವಿಫಲವಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಸಭೆ ನಡೆಸದೆ ಮುಂದಿನ ಲೋಕಸಭಾ ಚುನಾವಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಆರೋಪಿಸಿದರು.