ಚುನಾವಣೆಯಲ್ಲಿ ಜನರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ: ನಳಿನ್ ಕುಮಾರ್ ಕಟೀಲ್ - ಕಾಂಗ್ರೆಸ್ ಭ್ರಷ್ಟಾಚಾರ ಪಕ್ಷ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ
ಉಪಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನ ಭ್ರಷ್ಟಾಚಾರದ ಕಾಂಗ್ರೆಸ್ ಪಕ್ಷವನ್ನು ತೆಗೆದು ಬಿಸಾಡಿದ್ದಾರೆ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದೇ ರೀತಿ ಮಾಡಿದಲ್ಲಿ ಮುಂದಿನ ಚುನಾವಣೆಯಲ್ಲಿ ಕೂಡ ಮತದಾರರು ಕಾಂಗ್ರೆಸ್ ಕೈಬಿಟ್ಟು, ಅರಬ್ಬಿ ಸಮುದ್ರಕ್ಕೆ ಬಿಸಾಡುತ್ತಾರೆ ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್ ಹೇಳಿಕೆ
ಮಂಗಳೂರು: ಬಿಜೆಪಿ ಭ್ರಷ್ಟಾಚಾರದ ಪಕ್ಷವಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂಬ ಸಂದೇಶವನ್ನು ಜನರು ನೀಡಿದ್ದು, ಈ ಚುನಾವಣೆಯ ಮೂಲಕ ರಾಷ್ಟ್ರದ ಹಾಗೂ ರಾಜ್ಯದ ಜನರು ಕಾಂಗ್ರೆಸ್ ತೆಗೆದು ಬಿಸಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜನತಾ ಜನಾರ್ದನನ ಎದುರು ಬಂಡೆ ಪುಡಿಯಾಗಿದೆ, ಹುಲಿಯಾ ಗೂಡು ಸೇರಿದೆ ಎಂದಿರುವ ನಳಿನಕುಮಾರ್ ಕಟೀಲ್, ಇನ್ನೂ ಎರಡುವರೆ ವರ್ಷಗಳ ಕಾಲ ಯಡಿಯೂರಪ್ಪ ಅವರ ಆಡಳಿತದಲ್ಲಿ ನೆಮ್ಮದಿಯಿಂದ ಇರಿ ಎಂದು ಜನರು ಆಶೀರ್ವದಿಸಿದ್ದಾರೆ. ಆದ್ದರಿಂದ ಎರಡೂವರೆ ವರ್ಷಗಳ ಈ ಆಡಳಿತವನ್ನು ಮೌನವಾಗಿ ಸಹಿಸಿಕೊಳ್ಳಿ ಎಂದು ಜನರು ವಿರೋಧ ಪಕ್ಷದವರಿಗೆ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಜನರ ಉತ್ತರವನ್ನು ಸ್ವೀಕರಿಸಿ ಎಂದು ವಿರೋಧ ಪಕ್ಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸಲಹೆ ನೀಡಿದರು.
ದಕ್ಷಿಣ ಭಾರತದ ತೆಲಂಗಾಣದಲ್ಲೂ ಬಿಜೆಪಿ ಉಪ ಚುನಾವಣೆಯಲ್ಲಿ ಸ್ಥಾನ ಪಡೆದಿದೆ. ಇನ್ನು ಬಿಹಾರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಸ್ಥಾನ ಪಡೆದಿದ್ದೇವೆ. ಗುಜರಾತ್ನಲ್ಲಿ ಎಂಟೂ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. ಈ ಮೂಲಕ ದೇಶದ ಇಡೀ ವಾತಾವರಣ ನರೇಂದ್ರ ಮೋದಿ ಪರವಾಗಿದೆ. ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಅಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಇಂದು ಸಿದ್ದರಾಮಣ್ಣನ ಗೂಡೆಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ವರುಣಾದಿಂದ ಅಂದೇ ಹೊರಗಟ್ಟಿದ್ದಾರೆ. ಈಗ ಶಿರಾ, ಆರ್ ಆರ್ ನಗರದಿಂದ ಹೊರಗಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಜನ ಬಾದಾಮಿಯಿಂದಲೂ ಹೊರಗಟ್ಟುತ್ತಾರೆ ಎಂದು ನಳಿನ್ ಕುಮಾರ್ ಛೇಡಿಸಿದರು.
ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸುತ್ತಾರೆ ಎಂದು ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಟವಲ್ ಹಾಕುವುದನ್ನು ನಿಲ್ಲಿಸಲಿ. ಇನ್ನು ಹತ್ತಾರು ವರ್ಷಗಳ ಕಾಲ ಬಿಜೆಪಿ ಕಾಂಗ್ರೆಸ್ಗೆ ಅಧಿಕಾರವನ್ನು ಕೊಡುವುದಿಲ್ಲ. ಪ್ರಾಮಾಣಿಕವಾಗಿ ವಿರೋಧ ಪಕ್ಷಗಳು ಏನು ಮಾಡಬೇಕೋ ಅದನ್ನು ಮಾಡಲಿ. ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಉದ್ಭವವಾಗಿಲ್ಲ. ಯಡಿಯೂರಪ್ಪ ನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಕಟೀಲ್ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.
ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ನಿಮ್ಮಗಳ ನಡುವಿನ ಅಕ್ರಮದ ಮುಂದುವರಿದ ಭಾಗವೇ ಬಂಟ್ವಾಳ ನಗರ ಪಂಚಾಯತ್ ನಲ್ಲಿ ನಿಮ್ಮ ಆಡಳಿತ. ಇಲ್ಲಿ ಎಸ್ಡಿಪಿಐನೊಂದಿಗೆ ಅಧಿಕಾರಕ್ಕಾಗಿ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಉತ್ತರ ನೀಡಲಿ. ಇದೇ ರೀತಿ ಮಾಡಿದಲ್ಲಿ ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನ ಕೈಬಿಟ್ಟು ಅರಬ್ಬಿ ಸಮುದ್ರಕ್ಕೆ ಬಿಸಾಡುತ್ತಾರೆ. ಆದ್ದರಿಂದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ವಿವರಿಸಿದ್ರು.