ಉಳ್ಳಾಲ(ಮಂಗಳೂರು) :ಒಂದೇ ದೇವರು, ಒಂದೇ ಜಾತಿ, ಒಂದೇ ಕುಲ ಎನ್ನುವ ಘೋಷದ ಮೂಲಕ ಮಾನವರಲ್ಲಿ ದೇವನನ್ನು ಕಂಡು, ಭೂಮಿಯಲ್ಲಿ ಹುಟ್ಟಿದ ಕಟ್ಟಕಡೆಯ ವ್ಯಕ್ತಿಗೂ ದೇವರನ್ನು ಕಾಣಲು ಸಾಧ್ಯ ಎನ್ನುವುದನ್ನು ನಾರಾಯಣ ಗುರುಗಳು ತೋರಿಸಿ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಮಂಗಳೂರು ವಿಧಾನಸಭಾ ಕ್ಷೇತ್ರ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಭಾನುವಾರ ಕಾಪಿಕಾಡ್ ಗಟ್ಟಿ ಸಮಾಜ ಭವನದಲ್ಲಿ ನಡೆದ 'ಮೆರುಗು-2021' ಪ್ರತಿಭಾ ಅನಾವರಣದ ಹೊಸ್ತಿಲು, ಆಯುಶ್ಮಾನ್ ಕಾರ್ಡ್ ಮತ್ತು ಶಾಲಾ ಶುಲ್ಕ ವಿತರಣಾ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಶಸ್ತಿ, ಪುರಸ್ಕಾರಗಳು 60ರ ನಂತರವೇ ಪಡೆಯುವುದು ಯೋಗ್ಯತೆ. ಬಿಲ್ಲವ ಶ್ರೀಪುರಸ್ಕಾರಕ್ಕೆ ಹಿರಿಯ ಜನಾರ್ದನ ಪೂಜಾರಿಯವರೇ ಭಾಜನರು. ಚುನಾವಣೆಯನ್ನು ಎದುರಿಸುವ ಪ್ರತಿ ಸಂದರ್ಭದಲ್ಲೂ ರಾಜಕೀಯ ಗುರುಗಳಾಗಿರುವ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದುಕೊಂಡೇ ಮುನ್ನಡೆದಿದ್ದೇನೆ.
ಕಳಂಕವಿಲ್ಲದ, ಭ್ರಷ್ಟಾಚಾರ ರಹಿತ ರಾಜಕಾರಣಿ ಜನಾರ್ದನ ಪೂಜಾರಿ ಆದರ್ಶರು. ಹಿಂದುತ್ವದ ಉನ್ನತಿಗಾಗಿ ಯಾವ ಕೆಲಸಕ್ಕೂ ಸಿದ್ಧ, ಹೊರತು ಯಾವ ಜಾತಿಗೂ ತಾನು ಸೀಮಿತನಲ್ಲ. 12 ವರ್ಷಗಳ ಸೇವೆಗೆ ಬಿಲ್ಲವ ಸಮುದಾಯದವರ ಕೊಡುಗೆಯೂ ಅಪಾರ ಎಂದರು.
ಇನ್ನು, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಡಿ.ಚಂದ್ರ ಸುವರ್ಣ ಮಾತನಾಡಿ,"ವೇದಿಕೆಯ ಮೂಲಕ ಶಾಲಾ ಶುಲ್ಕ ಪಡೆದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಸಮಾಜದ ವಿದ್ಯಾರ್ಥಿಗಳಾಗಿ ಬೆಳೆಯಬೇಕು. ಸಮಾಜದಲ್ಲಿ ಶಾಂತಿ, ಭಾರತದ ಸಂಸ್ಕಾರ ಉಳಿಸಲು ಮಾನವರ ನಡುವಿನ ಬಾಂಧವ್ಯ, ಗುರುಹಿರಿಯರಿಗೆ ಗೌರವ, ದೈವ-ದೇವರ ಮೇಲೆ ಭಯ, ಭಕ್ತಿ ಮೂಡಬೇಕು ಎಂದು ಹೇಳಿದರು.