ರಾಜ್ಯ ಸರ್ಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ದಬ್ಬಾಳಿಕೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುತ್ತೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನವಾಗಿದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರೆ, ಅವರ ಮೇಲೆಯೇ ಕೇಸ್ ಹಾಕಲಾಗುತ್ತಿದೆ. ಭ್ರಷ್ಟಾಚಾರ ಮುಚ್ಚಿ ಹಾಕಲು ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ ಅವರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಅಲ್ಲದೇ ಈ ಸಂಬಂಧ ಎಫ್ಐಆರ್ ಆಗಿದೆ. ಇನ್ನೊಂದೆಡೆ ಚೆಲುವರಾಯಸ್ವಾಮಿ ಮೇಲೆ ಅಧಿಕಾರಿಗಳೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೂ ಮುಖ್ಯಮಂತ್ರಿ ಮೌನವಾಗಿದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ ಎಂದು ಟೀಕಿಸಿದರು.
ಸರ್ಕಾರದ ವಿರುದ್ದ ಆರೋಪ ಮಾಡಿದರೆ ಅಂತವರ ಮೇಲೆಯೇ ಕೇಸು ದಾಖಲಿಸುತ್ತಾರೆ. ಭ್ರಷ್ಟಾಚಾರದ ಮುಚ್ಚಿ ಹಾಕಲು ಇಂತಹ ದಬ್ಬಾಳಿಕೆ ನಡೆಸಲಾಗುತ್ತಿದೆ. ರೈತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿಯನ್ನು ರದ್ದುಪಡಿಸಲಾಗಿದೆ. ಕಿಸಾನ್ ಸಮ್ಮಾನ್ ಅಡಿ ನೀಡುತ್ತಿದ್ದ 4 ಸಾವಿರ ರೂ ರದ್ದುಪಡಿಸಲಾಗಿದೆ. 3 ತಿಂಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ರೈತರು ಬರದಿಂದ ತತ್ತರಿಸುತ್ತಿದ್ದಾಗ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇದೊಂದು ರೈತ ವಿರೋಧಿ ಸರ್ಕಾರ, ಭ್ರಷ್ಟಾಚಾರ ಪರವಾದ ಸರ್ಕಾರ ಎಂದರು.
ರಾಜ್ಯ ಸರ್ಕಾರ 64 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ, ರಾಜ್ಯದಲ್ಲೆಡೆ ಬರಗಾಲವಿದ್ದರೂ ಸರ್ಕಾರ ಬರ ಘೋಷಣೆ ಮಾಡಲು ಮೀನಮೇಷ ಎಣಿಸುತ್ತಿದೆ. ರಾಜ್ಯದೆಲ್ಲೆಡೆ ಮಳೆಯ ಕೊರತೆ ಎದುರಾಗಿದೆ ಆದ್ದರಿಂದ ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ :ಈಗಾಗಲೇ ಪುತ್ತೂರಿನ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ರಸ್ತೆ ಕಾಮಗಾರಿ ಮುಗಿದಿದೆ. ವಿವೇಕಾನಂದ ಕಾಲೇಜು ಸಂಪರ್ಕದ ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ರಸ್ತೆಗೆ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯಲಿರುವುದರಿಂದ ಕಾಮಗಾರಿ ಸ್ಪಲ್ಪ ನಿಧಾನವಾಗಿದೆ. ಉಳಿದಂತೆ ಉಪ್ಪಿನಂಗಡಿಯಿಂದ ಗುಂಡ್ಯತನಕ ಕಾಮಗಾರಿ ನಡೆಯುತ್ತಿದೆ. ಉಪ್ಪಿನಂಗಡಿಯಿಂದ ಮಾಣಿತನಕದ ಕಾಮಗಾರಿ ಮುಂದೆ ನಡೆಯಲಿದೆ. ಎಲ್ಲ ಕಾಮಗಾರಿಗಳಿಗೆ ವೇಗ ನೀಡುವ ಕೆಲಸ ಕಾರ್ಯ ಮಾಡಲಾಗುವುದು ಎಂದರು.
ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಕೊಡಗು ತನಕ ಚತುಷ್ಪಥ ರಸ್ತೆ ಕಾಮಗಾರಿಗೆ ಆದೇಶ ಬಂದಿದೆ. ಮಡಿಕೇರಿಯಿಂದ ಮಾಣಿಯ ತನಕದ ರಸ್ತೆಯನ್ನು ಈ ಹಿಂದೆ ಕೆಆರ್‌ಡಿಸಿಎಲ್ ಅಭಿವೃದ್ಧಿಪಡಿಸಿತ್ತು. ಆದರೆ ಕೆಆರ್‌ಡಿಸಿಎಲ್‌ನಿಂದ ಹಸ್ತಾಂತರ ಪ್ರಕ್ರಿಯೆ ತಡವಾಗಿರುವುದರಿಂದ ಸ್ಪಲ್ವ ತಡವಾಗಿದೆ. ಇದೀಗ ರಸ್ತೆಯ ಸರ್ವೇ ಕಾರ್ಯಗಳು ಮುಗಿದಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ, ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಇದ್ದರು.
ರೈತರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಸರ್ಕಾರ :ಕಾವೇರಿ ನೀರಿನ ವಿಚಾರದಲ್ಲಿ ಸಮರ್ಥವಾದ ಮಂಡಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರಕಾರ ರೈತರಿಗೆ ದ್ರೋಹ ಮಾಡಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಸ್ಟಾಲಿನ್ ಅವರ ಒಳ ವ್ಯವಹಾರದ ಪರಿಣಾಮವಾಗಿ ಹಾಗೂ ಐಎನ್‍ಡಿಐಎ ಕೂಟಕ್ಕೆ ಪ್ರಯೋಜನ ನೀಡುವ ದೃಷ್ಟಿಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಲೇ ಕೆಲವೆಡೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಸರಕಾರ ನೀರು ಬಿಟ್ಟ ಬಳಿಕ ಕಾಟಾಚಾರಕ್ಕೆ ಸರ್ವ ಪಕ್ಷ ಸಭೆ ನಡೆಸಿದೆ. ಇನ್ನೊಂದೆಡೆ ರೈತರ ನಿರ್ಲಕ್ಷ್ಯದ ಧೋರಣೆ ಈ ಸರಕಾರದ್ದು ಎಂದು ಆರೋಪಿಸಿದ್ದಾರೆ. ದಲಿತರ ಮೇಲೆ ದಬ್ಬಾಳಿಕೆ ಮಾಡುವ ಸಚಿವ ಸುಧಾಕರ್ ಅವರ ರಾಜೀನಾಮೆ ಪಡೆಯಬೇಕು. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಟೀಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ :Grihabhagya Scheme: ಮಂಜೂರಾದರೂ ಕೆಲ ಪೌರ ಕಾರ್ಮಿಕರಿಗೆ ಸಿಗದ ಗೃಹಭಾಗ್ಯ.. ಮನೆ ನಿರ್ಮಿಸುವಂತೆ ಮನವಿ