ಉಳ್ಳಾಲ\ಮಂಗಳೂರು:ತಲಪಾಡಿ ದಾಟಿ ಬರುವವರಿಗಾಗಿ ಕೇರಳದ ಗಡಿ ಭಾಗವಾದಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಪರಿಶೀಲನಾ ಕೇಂದ್ರ ಹಾಗೂ ಪೊಲೀಸ್ ಬ್ಯಾರಿಕೇಡ್ಗಳನ್ನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಲಾಗಿದೆ.
ತೂಮಿನಾಡಿನಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಪರಿಶೀಲನಾ ಕೇಂದ್ರ ತೆರವುಗೊಳಿಸಿ ಅಂತಾರಾಜ್ಯ ಪ್ರಯಾಣ ಸೌಕರ್ಯ ಕಲ್ಪಿಸುವಂತೆ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ದೇಶನವಿದ್ದರೂ ಕೇರಳ ಸರಕಾರ ಅದರ ವಿರುದ್ಧವಾಗಿ ನಡೆದುಕೊಳ್ತಿದ್ದು, ಕರ್ನಾಟಕಕ್ಕೆ ಹೋಗಲು ಪಾಸ್ ಕಡ್ಡಾಯ ಮಾಡುವ ಮೂಲಕ ಪ್ರಯಾಣ ನಿಯಂತ್ರಣ ಮಾಡುತ್ತಿದೆ. ಈ ಕ್ರಮದ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ "ಪಾಸ್ ಉಲ್ಲಂಘನಾ ಆಂದೋಲನ"ವು ತಲಪಾಡಿ ಗಡಿಯಲ್ಲಿ ಜರುಗಿತು.
ಈ ನಿಮಿತ್ತ ತಲಪಾಡಿ ಕೆಳಗಿನ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಳಗಿನ ಟೋಲ್ ಬೂತ್ ಸುತ್ತುವರಿದು, ಅಂತಾರಾಜ್ಯ ಗಡಿ ಸಂಪರ್ಕದ ಕೇರಳ ಪೊಲೀಸ್ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಮಾತನಾಡಿ, ಅನಗತ್ಯ ಪಾಸು ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೇ ಕಷ್ಟಪಡುತ್ತಿದ್ದಾರೆ ಎಂದರು.
ಪೆಟ್ ಕಮ್ಮಿಗಳ ಸರಕಾರ !
ಕಮ್ಯುನಿಸ್ಟರೆಂದರೆ ಕಮ್ಮಿಗಳು, ಬುದ್ಧಿ ಕಡಿಮೆ ಇರುವವರು. ಆದ್ದರಿಂದ ಕೇರಳದಲ್ಲಿ ಆಡಳಿತದಲ್ಲಿರುವುದು ಪೆಟ್ ಕಮ್ಮಿಗಳು. ಅವರನ್ನು ವಿರೋಧಿಸಬೇಕಾದ ವಿರೋಧ ಪಕ್ಷದಲ್ಲಿರುವ ಶಾಸಕರು ನಿಷ್ಕ್ರಿಯರಾಗಿದ್ದಾರೆ. ಅದನ್ನು ಓಡಿಸಲು ಬಿಜೆಪಿ ಕಟಿಬದ್ದವಾಗಿದೆ ಎಂದು ಶ್ರೀಕಾಂತ್ ಕೇರಳ ಸರಕಾರವನ್ನು ಕಟುವಾಗಿ ಟೀಕಿಸಿದರು.